
ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಶನಿವಾರ ಗುಬ್ಬಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹೋರಾಟಗಾರರ ಮೇಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಶಾಸಕರು, ಇಬ್ಬರು ಸ್ವಾಮೀಜಿಗಳು ಸೇರಿದಂತೆ ಒಟ್ಟು11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜೆಡಿಎಸ್‌ನ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ತುಮಕೂರು ಗ್ರಾಮೀಣ ಶಾಸಕ ಬಿ. ಸುರೇಶ್ ಗೌಡ ಮತ್ತು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಗಳಲ್ಲಿ ಒಬ್ಬರಿಗೆ ತೀವ್ರವಾಗಿ ಗಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ಗಳಲ್ಲಿ ಕೆಲವು ಜಾಮೀನು ರಹಿತ ಆರೋಪಗಳನ್ನು ಸಹ ಸೇರಿಸಲಾಗಿದೆ.
ಬಿಎನ್‌ಎಸ್‌ನ ಸೆಕ್ಷನ್ 191, 115(2), 121(1), 132, 189(2), 190, 223, 351(2) ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನ ಮೂಲಕ ರಾಮನಗರಕ್ಕೆ ಹೇಮಾವತಿ ನೀರು ಹರಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಶನಿವಾರ ರೈತರ ಬೃಹತ್ ಪ್ರತಿಭಟನೆ ನಡೆದಿತ್ತು.
ರೈತರು ನಿಷೇಧಾಜ್ಞೆ ಉಲ್ಲಂಘಿಸಿ, ಹೆದ್ದಾರಿ ತಡೆದು, ರಸ್ತೆಗಳಲ್ಲೇ ಟೈರ್ಯಗೆ ಬೆಂಕಿ ಹಚ್ಚಿ ಪೈಪ್‌ಗಳನ್ನು ಪುಡಿ, ಪುಡಿ ಮಾಡಿ, ಭಾರೀ ಹಾನಿಯುಂಟು ಮಾಡಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಗೆ ಗಾಯವಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕರಿಗೆ ತೊಂದರೆ, ಸರ್ಕಾರಿ ವಾಹನಗಳಿಗೆ ಹಾನಿ, ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಮಾಡಿ ಸಾರ್ವಜನಿಕರಿಗೆ ತೊಂದರೆ ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ.
ಕಲ್ಲು ತೂರಾಟದಲ್ಲಿ ತುರುವೇಕೆರೆ ಪೊಲೀಸ್ ನಿರೀಕ್ಷಕ ಲೋಹಿತ್ ಬಿಎನ್ ಅವರಿು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಡುವೆ ಪ್ರತ್ಯೇಕ ಎಫ್‌ಐಆರ್‌ನಲ್ಲಿ, ಬಿಜೆಪಿ ನಾಯಕ ದಿಲೀಪ್ ಕುಮಾರ್ ಮತ್ತು ಅವರ ಬೆಂಬಲಿಗರಾದ ರಾಕೇಶ್, ಕೌಶಿಕ್ ಮತ್ತು ನೂರಾರು ಮಂದಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109 ರ ಅಡಿಯಲ್ಲಿ ಕೊಲೆಗೆ ಯತ್ನದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement