
ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ 18 ವಿವಿಧ ಮಾದರಿ ನಂದಿನಿ ಕೇಕ್ ಹಾಗೂ ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಿನ್ನೆ ಜೂನ್ 1 ರಂದು ವಿಶ್ವ ಹಾಲು ದಿನಾಚರಣೆ ಹಿನ್ನೆಲೆಯಲ್ಲಿ ಹಲವು ಉತ್ಪನ್ನಗಳನ್ನು ಅನಾವರಣ ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಖಾಸಗಿ ಬ್ರಾಂಡ್‌ನ ಕೇಕ್ ಹಾಗೂ ಮಫಿನ್‌ಗಳಿಗಿಂತ ನಂದಿನಿ ಕೇಕ್ ಹಾಗೂ ಮಫಿನ್‌ಗಳು ಉತ್ತಮ ಗುಣಮಟ್ಟದಲ್ಲಿ ಹಾಗೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ ಉತ್ಪನ್ನಗಳು, ನಂದಿನಿ ಹಲ್ವಾ, ಅಲ್ಲದೇ ಬ್ರೆಡ್, ಬನ್, ಐಸ್ ಕ್ರೀಂ ಸೇರಿದಂತೆ ಈಗಾಗಲೇ 150ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಕೆ.ಎಂ.ಎಫ್ ಹಾಗೂ ಹಾಲು ಒಕ್ಕೂಟಗಳಿಂದ ಮಾರಾಟ ಮಾಡಲಾಗುತ್ತಿದೆ.
ಇದರಲ್ಲಿ ವೆನಿಲ್ಲಾ, ಚಾಕೊಲೇಟ್, ಪೈನಾಪಲ್, ಸ್ಟ್ರಾಬೆರಿ ಮತ್ತು ಮಾವಾ ಎಂಬ ಐದು ವಿಶಿಷ್ಟ ರುಚಿಗಳ ಕಪ್ ಕೇಕ್‌ಗಳನ್ನು ಬಿಡುಗಡೆ ಮಾಡಲಾಯಿತು. ಎಲ್ಲವೂ 150 ಗ್ರಾಂ. ತೂಕದ ಪೊಟ್ಟಣಗಳಲ್ಲಿ ಲಭ್ಯ.
ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಜನಪ್ರಿಯತೆ ಹೊಂದಿರುವ ನಂದಿನಿ ಉತ್ಪನ್ನಗಳು ಗ್ರಾಹಕರ ಮನ್ನಣೆ ಗಳಿಸಿದ್ದು, ಈ ಸಾಲಿಗೆ ವಿಶ್ವ ಹಾಲು ದಿನದಂದು ನಂದಿನಿ ಕೇಕ್ ಮತ್ತು ಮಫೀನ್‌ಗಳು ಸೇರ್ಪಡೆಯಾಗುತ್ತಿದೆ. ಗ್ರಾಹಕರು ಎಂದಿನಂತೆ ನಂದಿನಿ ಉತ್ಪನ್ನಗಳನ್ನು ಬಳಸುವ ಮೂಲಕ ರೈತರ ಸಹಕಾರಿ ಸಂಸ್ಥೆ ಬೆಳವಣಿಗೆಗೆ ಸಹಕರಿಸಬೇಕೆಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜಿ.ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪಾಂಜಿ ವೆನಿಲ್ಲಾ ಕೇಕ್ 25 ಗ್ರಾಂ ಗೆ ರೂ.10, ಫ್ರೂಟಿ ಸ್ಲೈಸ್ ಕೇಕ್ 30 ಗ್ರಾಂಗೆ ರೂ.5, ಚಾಕೋ ಕಿತ್ತಲೆ ಸ್ಲೈಸ್ ಕೇಕ್, ವೆನಿಲ್ಲಾ ಸ್ಲೈಸ್ ಕೇಕ್, ಅನಾನಸ್ ಸ್ಲೈಸ್ ಕೇಕ್ 50 ಗ್ರಾಂ ಗೆ ರೂ.15ರಿಂದ 20, ವೆನಿಲ್ಲಾ ಮಫಿನ್, ಚಾಕಲೇಟ್ ಮಫಿನ್, ಅನಾನಸ್ ಮಫಿನ್, ಸ್ಟ್ರಾಬೆರಿ ಮಫಿನ್, ಮಾವಾ ಮಫಿನ್ 150 ಗ್ರಾಂ ಗೆ ರೂ.50, ಪ್ಲಮ್ ಕೇಕ್, ಚಾಕೋ ವೆನಿಲ್ಲಾ ಕೇಕ್ , ಫ್ರೂಟ್ ಕೇಕ್, ವೆನಿಲ್ಲಾ ಕೇಕ್, ಚಾಕೊಲೇಟ್ ಕೇಕ್, ವಾಲ್ನಟ್ ಬನಾನಾ ಕೇಕ್, ಚಾಕಲೆಟ್ ಬೆಲ್ಲದ ಕೇಕ್ ಹಾಗೂ ಕೊಬ್ಬರಿ ಬೆಲ್ಲದ ಕೇಕ್ 200 ಗ್ರಾಂಗೆ ರೂ.110 ದರವನ್ನು ನಿಗದಿಪಡಿಸಲಾಗಿದೆ.
ಬಿಡುಗಡೆಯಾಗಿರುವ ನೂತನ ಉತ್ಪನ್ನಗಳು ಭಾನುವಾರದಿಂದಲೇ ರಾಜ್ಯದ ಎಲ್ಲ ನಂದಿನಿ ಮಳಿಗೆಗಳಲ್ಲಿ ಸಿಗಲಿವೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement