
ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಭಾನುವಾರ 35 ವರ್ಷದ ವ್ಯಕ್ತಿಯನ್ನು ಏಳು ಜನರ ತಂಡವೊಂದು ಬೇಕರಿಯಲ್ಲಿ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ಚನ್ನಪ್ಪ ಹುಸೇನಪ್ಪ ನಾರಿನಾಳ್ ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತಿರುವ ದೃಶ್ಯ, ಬೇಕರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊಲೆಯಾದ ವ್ಯಕ್ತಿಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಳೆಯ ದ್ವೇಷ ಮತ್ತು ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಗಂಗಾವತಿ ಡಿವೈಎಸ್ಪಿ ಮತ್ತು ತಾವರಗೇರಾ ಸಿಪಿಐ ಸೇರಿದಂತೆ ಹಿರಿಯ ಅಧಿಕಾರಿಗಳು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಕೊಪ್ಪಳ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರವಿ, ಪ್ರದೀಪ್, ಮಂಜುನಾಥ್, ನಾಗರಾಜ್, ಗೌತಮ್, ಮಂಜುನಾಥ್ ಮತ್ತು ಪ್ರಮೋದ್ ಎಂದು ಗುರುತಿಸಲಾಗಿದೆ.
ಭಯಾನಕ ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
Advertisement