
ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಆರ್ ಸಿಬಿ ಸಂಭ್ರಮಾಚರಣೆ ವೇಳೆಯಲ್ಲಿ ಉಂಟಾದ ಕಾಲ್ತುಳಿತ ಘಟನೆಯಿಂದ 11 ಮಂದಿ ಸಾವನ್ನಪ್ಪಿದ್ದಾರೆ.
ಈ ದುರಂತ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ.
ಗಾಯಾಳುಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಇದು ಆಕಸ್ಮಿಕವಾಗಿ ಆದ ದುರಂತವಲ್ಲ. ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಸಂಪೂರ್ಣ ಬೇಜವಾಬ್ದಾರಿತನದಿಂದ ಆಗಿದೆ ಎಂದು ಆರೋಪಿಸಿದರು.
ಸರ್ಕಾರ ವಿಧಾನಸೌಧದಲ್ಲಿ ಆರ್ ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ಆಯೋಜಿಸಿತ್ತೇ ಹೊರತು ಸ್ಟೇಡಿಯಂನಲ್ಲಿ ಅಲ್ಲ. ಕಾಲ್ತುಳಿತ ಹಾಗೂ ಸಾವುಗಳಿಗೆ ರಾಜ್ಯ ಸರ್ಕಾರ ಹೊಣೆಯಲ್ಲ ಎಂದು ಮುಖ್ಯಮಂತ್ರಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ಇನ್ನೂ ಆತಂಕಕಾರಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸರ್ಕಾರದ ಪಾತ್ರವನ್ನು ಅಲ್ಲಗಳೆಯುವ ಮತ್ತು ಜವಾಬ್ದಾರಿಯುತ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನವಾಗಿದೆ. ತಪ್ಪನೆಲ್ಲಾ ಮುಚ್ಚಿಕೊಂಡು ಆಡಳಿತ ಯಂತ್ರಕ್ಕೆ ಕ್ಲೀನ್ ಚೀಟ್ ನೀಡುವ ಉದ್ದೇಶವಾಗಿದೆ. ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸೂಕ್ತ ರೀತಿಯಲ್ಲಿ ತನಿಖೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಯಲು ಹೈಕೋರ್ಟ್ ನಿಂದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ ರೂ. 50 ಲಕ್ಷ ಪರಿಹಾರ ನೀಡಬೇಕು ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
Advertisement