
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ RCB, KSCA, DNA ವಿರುದ್ಧ FIR ದಾಖಲಿಸಲಾಗಿದ್ದು, ಬಂಧನಕ್ಕೆ ಆದೇಶಿಸಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ (IPL) ಟ್ರೋಫಿ ಗೆದ್ದಿದ್ದು, ಆ ಮೂಲಕ ಕೋಟ್ಯಾಂತರ ಆರ್‌ಸಿಬಿ (RCB) ಅಭಿಮಾನಿಗಳ ಕನಸನ್ನು ನನಸು ಮಾಡಿದೆ.
ಇದಕ್ಕಾಗಿ ಇಂದು ಆರ್ ಸಿಬಿ ತಂಡ ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸಲು ಮುಂದಾಗಿತ್ತು. ಆದರೆ ಈ ಸಂಭ್ರಮಾಚರಣೆಯೇ ದುರಂತಕ್ಕೆ ಕಾರಣವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಧಾವಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ.
ಆರ್ ಸಿಬಿಗೆ ಆಘಾತ, ಬಂಧನಕ್ಕೆ ಆದೇಶ
ಈಗಾಗಲೇ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಇದೀಗ ಆರ್ ಸಿಬಿ ಆಡಳಿತ ಮಂಡಳಿ ವಿರುದ್ಧವೂ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ಆರ್ ಸಿಬಿ ಆಟಗಾರರ ಸನ್ಮಾನ ಸಮಾರಂಭಕ್ಕೆ ಸಿದ್ಧತೆ ನಡೆಸಲು ಇನ್ನೂ ಕೆಲವು ದಿನಗಳ ಕಾಲಾವಕಾಶ ನೀಡುವಂತೆ ಪೊಲೀಸರ ಸಲಹೆಯನ್ನು ಕ್ರಿಕೆಟ್ ಸಂಸ್ಥೆ ನಿರ್ಲಕ್ಷಿಸಿದೆ ಎಂದು ತೋರುತ್ತದೆ.
ಹೀಗಾಗಿ ಆರ್ ಸಿಬಿ ಮ್ಯಾನೇಜ್ ಮೆಂಟ್, ಕೆಎಸ್ ಸಿಎ ಮತ್ತು ಕಾರ್ಯಕ್ರಮ ಆಯೋಜನೆ ಮಾಡಿದ್ದ ಡಿಎನ್ಎ ಸಂಸ್ಥೆಯ ಅಧಿಕಾರಿಗಳನ್ನು ಬಂಧಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ದೇಶವನ್ನೇ ಬೆಚ್ಚಿಬೀಳಿಸಿದ ಈ ಅಪಘಾತದ ತನಿಖೆಯನ್ನು ರಾಜ್ಯದ ಅಪರಾಧ ತನಿಖಾ ಇಲಾಖೆ ವಹಿಸಿಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
Advertisement