
ಬೆಂಗಳೂರು: ಮೊದಲ ಬಾರಿ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB)ದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಗುರುವಾರ RCB, KSCA ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ವಿರುದ್ಧ FIR ದಾಖಲಿಸಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ, ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(ಕೆಎಸ್ ಸಿಎ) ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಸರ್ಕಾರ ನಿರ್ಧಾರಿಸಿದ್ದು, ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸಿಐಡಿ ತನಿಖೆಗೆ ನೀಡುವುದಾಗಿ ತಿಳಿಸಿದೆ.
ಪೊಲೀಸರ ಪ್ರಕಾರ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 123/2025 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 105, 125(1)(2), 132, 121/1, 190 ಮತ್ತು 3(5) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅಲ್ಲದೆ ಕಾಲ್ತುಳಿತದ ಬಗ್ಗೆ ಸರ್ಕಾರವು ಮ್ಯಾಜಿಸ್ಟೀರಿಯಲ್ ತನಿಖೆಯನ್ನು ಸಹ ಘೋಷಿಸಿದೆ. ಯಾವುದೇ ಲೋಪಗಳು ಸೇರಿದಂತೆ ಕಾಲ್ತುಳಿತದ ಕಾರಣಗಳನ್ನು ಪರಿಶೀಲಿಸಲು ಮತ್ತು ಹೊಣೆಗಾರಿಕೆಯನ್ನು ಸರಿಪಡಿಸಲು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ 15 ದಿನಗಳಲ್ಲಿ ವಿಚಾರಣೆ ನಡೆಸಿ, ವರದಿ ಸಲ್ಲಿಸಲಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಆರ್‌ಸಿಬಿ ಆಟಗಾರರನ್ನು ಗೌರವಿಸಲು ವಿಶೇಷ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಜನ ಸಾವನ್ನಪ್ಪಿದ್ದಾರೆ ಮತ್ತು 56 ಜನ ಗಾಯಗೊಂಡಿದ್ದಾರೆ.
Advertisement