
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಕೆಎಸ್‌ಸಿಎ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ರಿಲೀಫ್ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಮತ್ತು ಇತರ ಕೆಲವು ಪದಾಧಿಕಾರಿಗಳು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕೆಎಸ್‌ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ. ಆದರೆ, ವಿಚಾರಣೆಗೆ ಸಹಕರಿಸುವಂತೆ ಅರ್ಜಿದಾರರಿಗೆ ಷರತ್ತು ವಿಧಿಸಿದೆ. ಈ ಮೂಲಕ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜೈರಾಮ್ ಅವರಿಗೆ ರಿಲೀಫ್ ಸಿಕ್ಕಿದೆ. ಆರ್ ಸಿಬಿಯ (RCB) ಚೊಚ್ಚಲ ಐಪಿಎಲ್ (IPL 2025) ಟ್ರೋಫಿ ಗೆಲುವಿನ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಂಭ್ರಮಾಚರಣೆಗೆ ಸೂತಕ ಅಂಟಿಕೊಂಡಿತ್ತು.
Advertisement