ಐಪಿಎಲ್ ಟೂರ್ನಿಯಲ್ಲಿ RCB ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಸಂಬಂಧ ನೈತಿಕ ಹೊಣೆ ಹೊತ್ತು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ಎ ಶಂಕರ್ ಮತ್ತು ಇ ಎಸ್ ಜೈರಾಮ್ ರಾಜೀನಾಮೆ ನೀಡಿದ್ದಾರೆ. 2 ದಿನಗಳಲ್ಲಿ ನಡೆದ ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆಯಲ್ಲಿ ನಮ್ಮ ಪಾತ್ರ ಬಹಳ ಸೀಮಿತವಾಗಿದ್ದರೂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ನಾವು ರಾಜೀನಾಮೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನಿರ್ವಹಣೆ ಮತ್ತು ಜನಸಂದಣಿ ನಿರ್ವಹಣೆ ಸಂಘದ ಜವಾಬ್ದಾರಿಯಲ್ಲ. ವಿಧಾನಸೌಧದಲ್ಲಿ ಆರ್‌ಸಿಬಿ ಸಂಭ್ರಮಾಚರಣೆಗಳನ್ನು ನಡೆಸಲು ಅನುಮತಿ ಕೋರಿದ್ದೆವು ಎಂದು ಹೈಕೋರ್ಟ್ ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್ ಮತ್ತು ಖಜಾಂಚಿ ಜಯರಾಮ್ ತಿಳಿಸಿದ್ದಾರೆ. ಈಮಧ್ಯೆ, ಕಾಲ್ತುಳಿತ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಸಿಐಡಿ ವಿಶೇಷ ವಿಚಾರಣಾ ದಳದ ಎಸ್ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಕಾಲ್ತುಳಿತ ಪ್ರಕರಣದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಕಚೇರಿಗೆ ಭೇಟಿ ನೀಡಿ, ಕಾಲ್ತುಳಿತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ.
RCB ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ದೂರು ನೀಡಿದ್ದಾರೆ. "ಕಾಲ್ತುಳಿತ ಪ್ರಕರಣದಲ್ಲಿ ಮೊದಲ ಆರೋಪಿ ಸಿದ್ದರಾಮಯ್ಯ ಮತ್ತು ಎರಡನೇ ಆರೋಪಿ ಡಿ.ಕೆ ಶಿವಕುಮಾರ್ ಆಗಿದ್ದು, ಇಬ್ಬರೂ ರಾಜಕೀಯ ಲಾಭ ಪಡೆಯುವ ಉದ್ದೇಶವನ್ನು ಹೊಂದಿದ್ದರು. ಅವರಿಂದಲೇ ಸಾವುಗಳು ಸಂಭವಿಸಿವೆ. ನಾನು ಜಿ. ಪರಮೇಶ್ವರ ಅವರನ್ನು 3ನೇ ಆರೋಪಿ ಎಂದು ಉಲ್ಲೇಖಿಸಿದ್ದೇನೆ ಎಂದು ರಾಜೀವ್ ತಿಳಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರು ಕೊಟ್ಟಿಗೆಪಾಳ್ಯದ ನಿವಾಸಿ ಗಿರೀಶ್ ಕುಮಾರ್ ರಾಜ್ಯಪಾಲರಿಗೆ ಸುದೀರ್ಘ ಪತ್ರ ಬರೆದು ಸಿಎಂ ವಿರುದ್ಧ ದೂರು ನೀಡಿದ್ದಾರೆ.
ಜೂನ್ 4 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿದ್ದು, ದುರಂತದ ಹೊಣೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ ಹೊತ್ತುಕೊಳ್ಳಬೇಕು. ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. 'ಐವರು ಪೊಲೀಸ್ ಅಧಿಕಾರಿಗಳನ್ನು ತರಾತುರಿಯಲ್ಲಿ ಅಮಾನತುಗೊಳಿಸಿರುವುದು ಅನಗತ್ಯ. ಸರ್ಕಾರದ ತಪ್ಪುಗಳಿಗೆ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಿದರೆ, ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವಿರಾಮ ನೀಡಿದ್ದ ಮುಂಗಾರು ಮಳೆ ಜೂನ್ 8ರಿಂದ ಮತ್ತೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿ ತೀರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ, ಜಲಾಶಯದಿಂದ ನೀರು ಬಿಡುಗಡೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳಿಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಧಾರವಾಡ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿನಯ್ ಕುಲಕರ್ಣಿ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್, ಶುಕ್ರವಾರ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಒಂದು ವಾರದಲ್ಲಿ ಕೋರ್ಟ್ ಮುಂದೆ ಶರಣಾಗಲು ಕಾಂಗ್ರೆಸ್ ಶಾಸಕನಿಗೆ ಸೂಚಿಸಿದೆ. ಈ ಮೂಲಕ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ. ವಿನಯ್ ಕುಲಕರ್ಣಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
Advertisement