
ಮಂಡ್ಯ: ಮಂಡ್ಯದ ಎಲೆಚಾಕನಹಳ್ಳಿ ಗ್ರಾಮದಲ್ಲಿ ಮಾರಮ್ಮ ದೇವಸ್ಥಾನ ಪ್ರವೇಶದ ವಿಚಾರದಲ್ಲಿ ಸವರ್ಣೀಯ ಮತ್ತು ದಲಿತ ಸಮುದಾಯಗಳ ನಡುವೆ ಸಂಘರ್ಷ ನಡೆದಿದ್ದು, ಘಟನೆ ಬಳಿಕ ಗ್ರಾಮದಲ್ಲಿ ಶನಿವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ, ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸರು ಗ್ರಾಮದಲ್ಲಿ ಬಿಗಿ ಭದ್ರತೆ ನಿಯೋಜನೆಗೊಳಿಸಿದರು.
ಮೇಲ್ಜಾತಿಯ ಜನರು ಮಾರಮ್ಮ ದೇವಸ್ಥಾನಕ್ಕೆ ದಲಿತರು ಪ್ರವೇಶಿಸದಂತೆ ತಡೆದರು ಎನ್ನಲಾಗಿದ್ದು, ಘಟನೆ ಬಳಿಕ ಎರಡು ಸಮುದಾಯಗಳ ನಡುವೆ ಘರ್ಷಣೆ ಶುರುವಾಗಿತ್ತು ಎಂದು ತಿಳಿದುಬಂದಿದೆ.
ಬಳಿಕ ತಾಲ್ಲೂಕು ಅಧಿಕಾರಿಗಳು ದೇವಸ್ಥಾನವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಬಿಗಿ ಭದ್ರತೆಯನ್ನು ನಿಯೋಜಿಸಿದರು. ನಂತರ, ಎರಡೂ ಸಮುದಾಯಗಳ ನಾಯಕರು ದೇವಸ್ಥಾನದ ಬಾಗಿಲುಗಳಿಗೆ ಪ್ರತ್ಯೇಕ ಬೀಗ ಹಾಕಿದರು, ಇದು ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿತು.
ಎರಡೂ ಗುಂಪುಗಳ ನಾಯಕರೊಂದಿಗೆ ಪ್ರತ್ಯೇಕ ಶಾಂತಿ ಸಭೆಗಳ ನಡೆಸಲಾಗಿದ್ದು, ಈ ಸಭೆಗಳು ವಿಫಲವಾಗಿವೆ ಎದು ತಿಳಿದುಬಂದಿದೆ.
ಗ್ರಾಮದ ದಲಿತರು ದೇವಸ್ಥಾನಕ್ಕೆ ಸಮಾನ ಪ್ರವೇಶವನ್ನು ಕೋರಿದ್ದಾರೆ, ಆದರೆ ಮೇಲ್ಜಾತಿಯ ನಾಯಕರು ಅದನ್ನು ವಿರೋಧಿಸುತ್ತಲೇ ಇದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಜೂ.3ರಂದು ತಡರಾತ್ರಿ ಸವರ್ಣೀಯರು ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ್ದಾರೆಂದು ದಲಿತ ಯುವಕ ವಿಜಯಕುಮಾರ್ ದೂರು ನೀಡಿದ್ದು, ಶಿವಲಿಂಗ ಅಲಿಯಾಸ್ ಪಾಪು, ದಿನೇಶ್, ಜನಾರ್ದನ, ಚೇತನ್‌ಕುಮಾರ್, ರೂಪೇಶ, ಮನು ಸೇರಿದಂತೆ ಇತರರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾದವನ್ನು ಪರಿಹರಿಸಲು ಅಧಿಕಾರಿಗಳು ಮುಂದಾಗಿದ್ದು, ಜೂನ್ 9 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
Advertisement