
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಸಂಸದ ಬಿ ವೈ ರಾಘವೇಂದ್ರ ಮತ್ತು ತೇಜಸ್ವಿನಿ ದಂಪತಿ ಪುತ್ರ ಸುಭಾಷ್ ಮದುವೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು ಕಳೆದ ರಾತ್ರಿ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ಜೆ.ಪಿ ನಡ್ಡಾ, ಉಪರಾಷ್ಟ್ರಪತಿ ಜಗದೀಪ್ ಧನಕರ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆಂಧ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪಾಲ್ಗೊಂಡು, ನವ ವಧು-ವರರಿಗೆ ಶುಭ ಹಾರೈಸಿದರು.
ಬಿಎಸ್‌ವೈ ಮೊಮ್ಮಗ ಸುಭಾಷ್ ಅವರ ವಿವಾಹ ಶ್ರಾವಣಾ ಜೊತೆ ಇಂದು ನೆರವೇರುತ್ತಿದೆ. ಅದರ ಪೂರ್ವಭಾವಿಯಾಗಿ ಶನಿವಾರ ರಿಸಪ್ಷನ್ ನಡೆಯಿತು. ಈ ಆರತಕ್ಷತೆ ಕಾರ್ಯಕ್ರಮಲ್ಲಿ ರಾಜಕೀಯ ಗಣ್ಯರೆಲ್ಲ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಬೈರತಿ ಸುರೇಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇನ್ನೂ ಅನೇಕರು ಆಗಮಿಸಿ, ನೂತನ ವಧು-ವರರಿಗೆ ಶುಭ ಕೋರಿದರು.
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಸುಭಾಷ್ ಆರತಕ್ಷತೆಗೆ ಆಗಮಿಸಿದ್ದು ವಿಶೇಷವಾಗಿತ್ತು. ನಟ ಯಶ್ ಅವರು ಕಾರಿಂದ ಇಳಿಯುತ್ತಿದ್ದಂತೆ ಅವರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದರು. ಯಶ್‌ರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ತಾಮುಂದು-ನಾಮುಂದು ಎಂದು ನುಗ್ಗಿದರು. ನಂತರ ಯಶ್ ಓಡುತ್ತ ಹೋಗಿ ಮದುಮಕ್ಕಳು ಇದ್ದ ವೇದಿಕೆ ತಲುಪಿದ್ದಾರೆ.
ಯಶ್‌ರನ್ನ ಬಿ.ಎಸ್.ಯಡಿಯೂರಪ್ಪ ಪ್ರೀತಿಯಿಂದ ಬರಮಾಡಿಕೊಂಡರು. ಸುಭಾಷ್ ಮತ್ತು ಶ್ರಾವಣಾಗೆ ಯಶ್ ಅವರು ಹೂಗುಚ್ಛ ಕೊಟ್ಟು ಅಭಿನಂದಿಸಿದರೆ, ಯಶ್‌ರಿಗೆ ಬಿ.ವೈ.ರಾಘವೇಂದ್ರ ಅವರು ಶಾಲು ಹೊದೆಸಿದರು. ನಂತರ ಅಲ್ಲಿಂದ ಯಶ್ ಹೊರಟರು.
Advertisement