
ನವದೆಹಲಿ: ಜೂನ್ 18ರಂದು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರು ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಈ ವಿಚಾರವಾಗಿ ಒಂದು ತೀರ್ಮಾನಕ್ಕೆ ಬರುವ ಭರವಸೆ ಇದೆ" ಎಂದು ತಿಳಿಸಿದರು.
ಭಾನುವಾರ ದೆಹಲಿಯಲ್ಲಿ ಮಾತನಾಡಿದ ಅವರು, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ವೀಕ್ಷಿಸಲು ನಾನು ಹಾಗೂ ಬೆಂಗಳೂರು ಪಾಲಿಕೆಯಿಂದ ಸುಮಾರು 15 ಸದಸ್ಯರ ತಂಡ ದೆಹಲಿಗೆ ಆಗಮಿಸಿದ್ದೇವೆ. ಇಲ್ಲಿ ನಗರದ ಹೊರಭಾಗದಲ್ಲಿ ವಾಸನೆರಹಿತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರ ಮಾಡಿದ್ದಾರೆ ಎಂದು ಕೇಳಿದ್ದೇನೆ.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕಸದಿಂದ ಇಂಧನ, ಅನಿಲ ಉತ್ಪಾದನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ದೆಹಲಿಯಲ್ಲಿನ ತಂತ್ರಜ್ಞಾನ ಅಳವಡಿಕೆ ಬಗ್ಗೆ ನಮಗೆ ಪ್ರಸ್ತಾವನೆ ಬಂದಿದ್ದು, ಹೀಗಾಗಿ ಅದನ್ನು ವೀಕ್ಷಣೆ ಮಾಡುತ್ತೇವೆ" ಎಂದು ಹೇಳಿದರು.
ದೆಹಲಿಯಲ್ಲಿ ನಗರ ಯೋಜನಾ ಪ್ರಾಧಿಕಾರದಲ್ಲಿ ರಸ್ತೆ ವಿಚಾರವಾಗಿ ಪ್ರತ್ಯೇಕ ನೀತಿ ಹೊಂದಿದ್ದು, ಇದನ್ನು ಪರಿಶೀಲನೆ ಮಾಡಲಾಗುವುದು" ಎಂದರು. ಹೈಕಮಾಂಡ್ ನಾಯಕರ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, "ಸಧ್ಯಕ್ಕೆ ಇಲ್ಲ. ಅವರ ಸಮಯ ಸಿಕ್ಕರೆ ಭೇಟಿ ಮಾಡುತ್ತೇನೆ. 10ರಂದು ಎತ್ತಿನಹೊಳೆ ವಿಚಾರವಾಗಿ ಸಿಎಂ ಸಭೆ ಕರೆದಿದ್ದಾರೆ. ಹೀಗಾಗಿ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸಾಗುತ್ತೇವೆ" ಎಂದು ತಿಳಿಸಿದರು.
ಸುಹಾಸ್ ಶೆಟ್ಟಿ ಪ್ರಕರಣ ಎನ್ಐಎಗೆ ವಹಿಸಿರುವ ಬಗ್ಗೆ ಕೇಳಿದಾಗ, "ನನಗೆ ಈ ವಿಚಾರ ಗೊತ್ತಿಲ್ಲ. ಈ ಸಂಬಂಧ ಗೃಹ ಸಚಿವರನ್ನು ಕೇಳಿ ಎಂದು ಹೇಳಿದರು. ಡಿಸಿಪಿಗಳ ಪತ್ರ ವೈರಲ್ ಆಗುತ್ತಿದೆ ಎಂದು ಕೇಳಿದಾಗ, "ಈ ಬಗ್ಗೆ ಗೃಹಮಂತ್ರಿಗಳನ್ನು ಕೇಳಿ. ಈ ಪ್ರಕರಣದಲ್ಲಿ ತನಿಖೆ ಆರಂಭವಾಗಿದ್ದು, ನಾವು ಈ ಪ್ರಕರಣದ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡುವುದು ಉತ್ತಮ. ವಿರೋಧ ಪಕ್ಷಗಳು ಏನು ಬೇಕಾದರೂ ಮಾತನಾಡಬಹುದು. ಆದರೆ ಕುನ್ಹಾ ಅವರ ಸಮಿತಿ ತನಿಖೆ ಮಾಡುತ್ತಿರುವುದರಿಂದ ನಮ್ಮ ಮಾತುಗಳ ತನಿಖೆ ಮೇಲೆ ಪರಿಣಾಮ ಬೀರಬಾರದು" ಎಂದು ಸ್ಪಷ್ಟನೆ ನೀಡಿದರು.
Advertisement