
ಚಿಕ್ಕಬಳ್ಳಾಪುರ: ವಿಧಾನಸೌಧದ ಮುಂಭಾಗ ನಡೆದ ಆರ್‌ಸಿಬಿ (RCB) ಆಟಗಾರರ ಸನ್ಮಾನ ಸಮಾರಂಭಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಿದ್ದು ತಾನೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಗೌರಿಬಿದನೂರು ಬಳಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರ್‌ಸಿಬಿ ಆಟಗಾರರ ಸನ್ಮಾನ ಸಮಾರಂಭಕ್ಕೆ ರಾಜ್ಯಪಾಲರು ತಾವಾಗೆ ಬಂದಿರಲಿಲ್ಲ. ಅವರನ್ನು ನಾನೇ ಆಹ್ವಾನಿಸಿದ್ದೆ ಎಂದು ಹೇಳಿದರು. ಜೂನ್ 4ರಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮತ್ತು ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಸಿಎಂ ಹೇಳಿದರು.
ಆ ದಿನ ಬೆಳಿಗ್ಗೆ 11.29ಕ್ಕೆ ಕೆಎಸ್‌ಸಿಎಯಿಂದ (KSCA) ಶಂಕರ್ ಮತ್ತು ಜಯರಾಮ್ ನನ್ನನ್ನು ಆಹ್ವಾನಿಸಿದ್ದು ಅದಕ್ಕೆ ನಾನು ಒಪ್ಪಿಕೊಂಡೆ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯಪಾಲರು ತಾವಾಗಿಯೇ ಬಂದಿದ್ದಾರೆ ಎಂಬ ಸುದ್ದಿಯನ್ನು ಪತ್ರಿಕೆಗಳು ಮತ್ತು ಮಾಧ್ಯಮಗಳು ಪ್ರಸಾರ ಮಾಡಿದ್ದು ತಪ್ಪು ಎಂದು ಸಿಎಂ ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ನನಗೆ ಫೋನ್ ಕೊಟ್ಟರು. ನಾನು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆನೆ. ಹೀಗಾಗಿ ರಾಜ್ಯಪಾಲರನ್ನು ಬರುವಂತೆ ಆಹ್ವಾನಿಸಿದೆ. ಅಭಿನಂದನಾ ಕಾರ್ಯಕ್ರಮವು 20 ನಿಮಿಷಗಳಲ್ಲಿ ಮುಗಿಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ರಾಜ್ಯಪಾಲರನ್ನು ಆಹ್ವಾನಿಸಿತ್ತು ಎಂಬ ಸಿದ್ದರಾಮಯ್ಯ ಅವರ ಹಿಂದಿನ ಹೇಳಿಕೆಗೆ ಇದು ವಿರುದ್ಧವಾಗಿದೆ.
Advertisement