News headlines 11-06-2025| ಕಾಂಗ್ರೆಸ್ ನಾಯಕರ ಮನೆ, ಕಚೇರಿಗಳ ಮೇಲೆ ED ದಾಳಿ, ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ರಿಲೀಫ್, ಜೂ.14 ವರೆಗೆ ರಾಜ್ಯಾದ್ಯಂತ ಭಾರಿ ಮಳೆ- IMD, ಮತ್ತೊಮ್ಮೆ ಜಾತಿ ಗಣತಿ ನಿರ್ಧಾರ ನನ್ನದಲ್ಲ, ಹೈಕಮಾಂಡ್ ಸೂಚನೆ- ಸಿಎಂ ಸಿದ್ದರಾಮಯ್ಯ

File pic
ಸಂಗ್ರಹ ಚಿತ್ರonline desk

1. ಕಾಂಗ್ರೆಸ್ ನಾಯಕರ ಮನೆ, ಕಚೇರಿಗಳ ಮೇಲೆ ED ದಾಳಿ

ಮಹರ್ಷಿ ವಾಲ್ಮೀಕಿ ಬುಡಕಟ್ಟು ಕಲ್ಯಾಣ ಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯ ಬಳ್ಳಾರಿ ಜಿಲ್ಲೆ ಮತ್ತು ಬೆಂಗಳೂರಿನಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು ಹಾಗೂ ಓರ್ವ ಸಂಸದನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ.ಇಂದು ಬೆಳಗ್ಗೆ 60 ಅಧಿಕಾರಿಗಳ ಇಡಿ ತಂಡ ಬಳ್ಳಾರಿಯಲ್ಲಿ ಐದು ಮತ್ತು ಬೆಂಗಳೂರು ನಗರದಲ್ಲಿ ಮೂರು ಸೇರಿ ಎಂಟು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದೆ. ಕಾಂಗ್ರೆಸ್ ಬಳ್ಳಾರಿ ಸಂಸದ ಇ. ತುಕಾರಾಂ ಮತ್ತು ಕಾಂಗ್ರೆಸ್ ಶಾಸಕರಾದ ನಾ. ರಾ. ಭರತ್ ರೆಡ್ಡಿ, ಜೆ.ಎನ್. ಗಣೇಶ್ ಅಕಾ ಕಂಪ್ಲಿ ಗಣೇಶ್ ಮತ್ತು ಎನ್.ಟಿ. ಶ್ರೀನಿವಾಸ್ ಅವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ಕರ್ನಾಟಕದಲ್ಲಿ 2024ರ ಲೋಕಸಭಾ ಚುನಾವಣೆಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಹಂಚಿಕೆ ಮಾಡಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಈ ದಾಳಿ ನಡೆಸಲಾಗುತ್ತಿದೆ. ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಈ ಹಣವನ್ನು ಬಳಸಲಾಗಿದೆ ಎಂಬ ಆರೋಪವೂ ಇದೆ.

2. ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ರಿಲೀಫ್

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.ವಿಶೇಷ ಸಿಬಿಐ ನ್ಯಾಯಾಲಯ ಇತ್ತೀಚೆಗೆ ವಿಧಿಸಿದ್ದ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಈ ಹಂತದಲ್ಲಿ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ನೀಡಿದೆ. ತಲಾ 10 ಲಕ್ಷ ಮೌಲ್ಯದ ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಅಲ್ಲದೇ, ಭಾರತ ಬಿಟ್ಟು ಹೋಗಲು ಅನುಮತಿ ಇರುವುದಿಲ್ಲ. ಗಾಲಿ ಜನಾರ್ದನ ರೆಡ್ಡಿ ಅವರ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆಯೂ ಆದೇಶಿಸಿದೆ. ಮೇ 6 ರಂದು ಓಬಳಾಪುರಂ ಮೈನಿಂಗ್ ಕಂಪನಿಗೆ ಸಂಬಂಧಿಸಿದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ಅಂತಿಮ ತೀರ್ಪು ನೀಡಿ 7 ವರ್ಷಗಳ ಶಿಕ್ಷೆ ವಿಧಿಸಿತ್ತು.

3. ಜೂ.14 ವರೆಗೆ ರಾಜ್ಯಾದ್ಯಂತ ಮಳೆ- IMD

ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದು, ಜೂನ್ 14ರವರೆಗೂ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಸೇರಿ 13 ಜಿಲ್ಲೆಗಳಲ್ಲಿ ಜೂನ್ 14ರವರೆಗೂ ಭಾರಿ ಮಳೆಯಾಗಲಿದೆ. ಈ ಪೈಕಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ಮೈಸೂರು, ಹಾಸನ, ದಾವಣಗೆರೆ, ಕೊಪ್ಪಳ, ರಾಯಚೂರು, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

4. ಮತ್ತೊಮ್ಮೆ ಜಾತಿ ಗಣತಿ ನಿರ್ಧಾರ ನನ್ನದಲ್ಲ, ಹೈಕಮಾಂಡ್ ಸೂಚನೆ- ಸಿಎಂ ಸಿದ್ದರಾಮಯ್ಯ

ಮತ್ತೊಮ್ಮೆ ಜಾತಿ ಗಣತಿ ನಡೆಸುವ ಸೂಚನೆಯನ್ನು ಹೈಕಮಾಂಡ್ ನೀಡಿದ್ದು, ಇದು ನನ್ನ ತೀರ್ಮಾನವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸ್ಪಷ್ಪಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಕ್ಕೆ ಕುಸುಮ್ ಯೋಜನೆ ಉದ್ಘಾಟನೆಗೆ ಆಗಮಿಸಿದ್ದ ಸಿಎಂ, ಹೆಲಿಪ್ಯಾಡ್ ನಲ್ಲಿ ಮಾತನಾಡಿದ್ದು, ಜಾತಿಗಣತಿ ನಡೆಸುವ ವಿಚಾರ ಹೈಕಮಾಂಡ್ ಸೂಚನೆ ಕೊಟ್ಟಿದೆ. ಅದರಂತೆ ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ ನಡೆಸಲಿದೆ ಎಂದು ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ರಾಜ್ಯ ಸರ್ಕಾರ ಈಗಾಗಲೇ ಜಾತಿಗಣತಿಗಾಗಿ ಖರ್ಚು ಮಾಡಿರುವ ರೂ.160 ಕೋಟಿ ಗೂ ಹೆಚ್ಚು ಹಣ ಸಂಪೂರ್ಣ ವ್ಯರ್ಥ ಎಂದು ಒಪ್ಪಿಕೊಳ್ಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದೆ.

5. ಕಾಲ್ತುಳಿತಪ್ರಕರಣ: RCB ಮಾರ್ಕೆಟಿಂಗ್ ಮುಖ್ಯಸ್ಥರ ಜಾಮೀನು ಅರ್ಜಿ ತೀರ್ಪು ನಾಳೆ

11 ಜನರ ಸಾವಿಗೆ ಕಾರಣವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥರು ಕೋರಿದ್ದ ಮಧ್ಯಂತರ ಜಾಮೀನಿನ ಮೇಲಿನ ಆದೇಶವನ್ನು ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ. ಜೂನ್ 12 ರಂದು ಮಧ್ಯಾಹ್ನ 2.30 ಕ್ಕೆ ಆದೇಶವನ್ನು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಜೂನ್ 6 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಅಪರಾಧ ಶಾಖೆ ಬಂಧಿಸಿತ್ತು, ಅವರು ದುಬೈಗೆ ತೆರಳಲು ಸಿದ್ಧರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com