ರಾಷ್ಟ್ರೀಯ ಬೆಳವಣಿಗೆಗೆ ಕರ್ನಾಟಕದ ಆರ್ಥಿಕ ಶಕ್ತಿಯೇ ಇಂಧನ: 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಪಾದನೆ
ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ರಾಜ್ಯದ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಿದರು.
16ನೇ ಹಣಕಾಸು ಆಯೋಗದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕರ್ನಾಟಕದ ಆರ್ಥಿಕ ಬಲವು ರಾಷ್ಟ್ರೀಯ ಬೆಳವಣಿಗೆಗೆ ಇಂಧನವಾಗಿದೆ. ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಯಾದರೆ ಕೇಂದ್ರ ಸರ್ಕಾರದ ಬೆಳವಣಿಗೆಯೂ ಆಗುತ್ತದೆ. ಹಾಗಾಗಿ ನ್ಯಾಯಯುತವಾಗಿ ತೆರಿಗೆ ಹಂಚಿಕೆಯಾಗಬೇಕು ಎಂದು ಕೋರಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪ್ರತಿ ವರ್ಷ 4.5 ಲಕ್ಷ ಕೋಟಿ ತೆರಿಗೆ ನೀಡುತ್ತದೆ. ಒಂದು ರೂ.ಗಳು ನೀಡಿದರೆ 15 ಪೈಸೆ ನಮಗೆ ವಾಪಸ್ಸು ಬರುತ್ತದೆ. ಈ ಅನ್ಯಾಯ 16ನೇ ಹಣಕಾಸು ಆಯೋಗದಲ್ಲಿ ಆಗಬಾರದು. 14ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು 4.713% ಕ್ಕೆ ಮತ್ತು 15 ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು 3.647%ಕ್ಕೆ ಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲನ್ನು ಒಟ್ಟಾರೆ 23% ರಷ್ಟು ಇಳಿಕೆ ಮಾಡಲಾಗಿದೆ. 5 ವರ್ಷಗಳಲ್ಲಿ ಒಟ್ಟು 68,275 ಕೋಟಿ ರೂ.ಗಳು ಕಡಿಮೆಯಾಗಿದೆ ಎಂದು ಮನವಿ ಮನವರಿಕೆ ಮಾಡಿಕೊಟ್ಟರು.
ಸೆಸ್, ಸರ್ಜಾರ್ಜ್ ನಲ್ಲಿ ಪಾಲು ಕೊಡದ ಕೇಂದ್ರ ಸರ್ಕಾರ: ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಜಾರ್ಜ್ ನಲ್ಲಿ ನಮಗೆ ಮಾತ್ರವಲ್ಲ ಯಾವ ರಾಜ್ಯಕ್ಕೂ ಪಾಲು ಕೊಡುವುದಿಲ್ಲ. ಕರ್ನಾಟಕದಿಂದ 2024-25ರಲ್ಲಿ ಒಟ್ಟು ರೂ. 5,41,709 ಕೋಟಿ ಸಂಗ್ರಹವಾಗಿದೆ. 8,084 ಕೋಟಿ ರೂ.ಗಳು ಕರ್ನಾಟಕ್ಕೆ ನಷ್ಟವಾಗಿದೆ. ಸೆಸ್ ಮತ್ತು ಸರ್ಚಾಜ್ ಶೇ.5ನ್ನು ಮೀರಬಾರದು, ಒಂದು ವೇಳೆ 5% ಮೀರಿದರೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲಿನಲ್ಲಿ ಶೇ.50 ರಷ್ಟು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಬೆಂಗಳೂರು ಅಭಿವೃದ್ಧಿಗೆ 1ಲಕ್ಷದ 15 ಸಾವಿರ ಕೋಟಿ ಅನುದಾನಕ್ಕೆ ಮನವಿ: 15ನೇ ಹಣಕಾಸಿನ ಆಯೋಗವು ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಒದಗಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು. ಇದಲ್ಲದೇ ಪೆರಿಫೆರಲ್ ರಿಂಗ್ ರಸ್ತೆ ಗೆ ₹3,000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಎರಡೂ ಸೇರಿ 11,495 ಕೋಟಿ ರೂ.ಗಳನ್ನು ಒದಗಿಸಬೇಕೆಂದು 15ನೇ ಹಣಕಾಸಿನ ಆಯೋಗವು ಶಿಫಾರಸ್ಸು ಮಾಡಿತ್ತು. ಈ ಹಣ ಬಂದಿಲ್ಲ. ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ನಮ್ಮ ಮನವಿಯಲ್ಲಿ ಕೋರಿರುವಂತೆ ಅನುದಾನವನ್ನು ಒದಗಿಸದೇ ಹೋದರೆ ಬೆಂಗಳೂರು ಅಭಿವೃದ್ಧಿಗೆ 1ಲಕ್ಷದ 15 ಸಾವಿರ ಕೋಟಿ ರೂ.ಗಳನ್ನು ಒದಗಿಸಬೇಕು ಎಂದು ಕೋರಿರುವುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅನುದಾನಕ್ಕೆ ಒತ್ತಾಯ: ಕಲ್ಯಾಣ ಕರ್ನಾಟಕದಲ್ಲಿ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು 5 ಜಿಲ್ಲೆಗಳ ವಾರ್ಷಿಕ ವರಮಾನವು ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ಸರಿಸಮಾನವಿದೆ. ಮಲೆನಾಡು ಪ್ರದೇಶಗಳಲ್ಲಿ ನಮಗೆ ಪ್ರವಾಹ, ಭೂ ಕುಸಿತದಂತಹ ಸಮಸ್ಯೆಗಳು ತಲೆದೋರುತ್ತವೆ. ಅದ್ದರಿಂದ ವಿಶೇಷ ಅನುದಾನ ಒದಗಿಸಬೇಕು ಎಂದು ಕೋರಿದೇವೆ ಎಂದರು.
ಕೇರಳ, ತಮಿಳುನಾಡಿಗೂ ನಮ್ಮಷ್ಟೇ ನಷ್ಟವಾಗಿದ್ದರೂ, ಅವರಿಗೆ ರಾಜಸ್ವ ಕೊರತೆ ಅನುದಾನವನ್ನು ನೀಡಲಾಗಿದೆ. ನಮಗೇಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಬಾರದು ಎಂದು ನಾವು ಹೇಳುವುದಿಲ್ಲ. ಆದರೆ ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಮಾಡಬೇಕು ಎಂದು ಕೋರಲಾಗಿದೆ. ಈ ಬಗ್ಗೆ ಇತರೆ ರಾಜ್ಯಗಳು ಧ್ವನಿ ಎತ್ತಿವೆ. ಸಭೆಯು ಒಂದೂ ಕಾಲ ಗಂಟೆಗಳ ಕಾಲ ಸೌಹಾರ್ದಯುತವಾಗಿ ನಡೆದಿದ್ದು, ಆಯೋಗದ ಅಧ್ಯಕ್ಷರು ನಮ್ಮ ಸಲಹೆಗಳನ್ನು ಸ್ವೀಕರಿಸಿದ್ದಾರೆ. ನಮ್ಮ ಕೋರಿಕೆಗಳನ್ನು ಈಡೇರಿಸುತ್ತಾರೆ ಎನ್ನುವ ಭರವಸೆ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ