
ಬೆಂಗಳೂರು: ಲಂಡನ್ ಗ್ಯಾಟ್ವಿಕ್‌ಗೆ ಜೂನ್ 12ರ ಮಧ್ಯಾಹ್ನ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಹಮದಾಬಾದ್‌ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ.
ಬ್ರಿಟಿಷ್-ಭಾರತೀಯ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ಎಂಬ ವ್ಯಕ್ತಿ ಬದುಕುಳಿದಿದ್ದು, ಇದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ರಮೇಶ್ ಅವರು ಬಚಾವಾಗಿದ್ದನ್ನು ಪವಾಡ ಎಂದೇ ಕರೆಯಲಾಗುತ್ತಿದೆ. ಇದೇ ರೀತಿ 2010ರ ಮೇ 22ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲೂ ಜೋಯೆಲ್ ಡಿ’ಸೋಜಾ ಎಂಬುವವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು. ಈ ದುರಂತದಲ್ಲಿ ಒಟ್ಟು 8 ಮಂದಿ ಬದುಕುಳಿತಿದ್ದರು.
ಗುಜರಾತ್ ವಿಮಾನ ದುರಂತ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜೋಯೆಲ್ ಅವರು, ದುರಂತ ಸಂಭವಿಸಿ 15 ವರ್ಷಗಳು ಕಳೆದಿವೆ. ಆದರೂ ಇನ್ನೂ ಆ ಘಟನೆ ಕಣ್ಣಿಗೆ ಕಟ್ಟಿದಂತಿದೆ. ಈಗಲೂ ನಮ್ಮಲ್ಲಿನ ಆತಂಕ ದೂರಾಗಿಲ್ಲ ಎಂದು ಹೇಳಿದ್ದಾರೆ.
ದುರಂತದ ವೇಳೆ ನಾನು ಒಬ್ಬಂಟಿಯಾಗಿ ಪ್ರಯಾಣಿಸಿರಲಿಲ್ಲ. ಅಂದು ದುಬಾಯಿಯಿಂದ ಹೊಸ ಕೆಲಸದ ನೇಮಕಾತಿ ಪತ್ರದೊಂದಿಗೆ ವೀಸಾ ಬದಲಿಸಲು ಊರಿಗೆ ವಾಪಸಾಗುತ್ತಿದ್ದೆ. ಮನೆಯವರೂ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಹೊಸ ಕೆಲಸ ಸಿಕ್ಕಿತು ಎನ್ನುವ ಖುಷಿಯಿತ್ತು. ಇನ್ನೇನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಸಂಭ್ರಮಿಸಬೇಕೆಂದುಕೊಂಡಿದ್ದೆ. ಆದರೆ ಆ ಖುಷಿ ಈ ದುರಂತದಲ್ಲಿ ಮರೆಯಾಯಿತು.
ತಾಂತ್ರಿಕ ವಿಭಾಗದಲ್ಲಿ ನನಗೆ ಕೆಲಸ ಸಿಕ್ಕಿತ್ತು. ಒಂದು ವಾರದಲ್ಲಿ ವರದಿ ಮಾಡಬೇಕಿತ್ತು. ಆದರೆ, ದುರಂತದಲ್ಲಿ ಕಾಲಿನ ಮೂಳೆ ಮುರಿತಗೊಂಡಿತ್ತು, ಡಿಸ್ಕ್ ಜಾರಿದ್ದರಿಂದ ಆಸ್ಪತ್ರೆಗೆ ದಾಖಲಾಗಿತ್ತೆಯ ಆ ಗಾಯಗಳು ಇಂದಿಗೂ ನನ್ನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇದೆ. ದುರಂತ ಸಂಭವಿಸಿ 15 ವರ್ಷಗಳು ಕಳೆದಿವೆ. ಆದರೆ, ಇನ್ನೂ ಆತಂಕ ದೂರಾಗಿಲ್ಲ. ವಿಮಾನ ಇಳಿದಾಗೆಲೆಲ್ಲಾ ಪ್ಯಾನಿಕ್ ಅಟ್ಯಾಕ್ ಆಗುತ್ತದೆ ಎಂದು ತಿಳಿಸಿದ್ದಾರೆ.
ದುರಂತದ ವೇಳೆ ನನ್ನ ಜತೆಗಿದ್ದ ಸಹ ಪ್ರಯಾಣಿಕರು ಕಣ್ಣೆದುರಲ್ಲೇ ಬೊಬ್ಬೆ ಹಾಕುತ್ತಿದ್ದರು. ಯಾರೂ ಯಾರನ್ನೂ ರಕ್ಷಿಸುವ ಪರಿಸ್ಥಿತಿ ಅಲ್ಲಿ ಇರಲಿಲ್ಲ. ನನ್ನ ಕಣ್ಣೆದರೇ ಜನರು ಸುಟ್ಟು ಬೂದಿಯಾಗುವುದನ್ನು ನೋಡಿದೆ. ಆದರೆ, ನಾನೂ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ನನ್ನ ಅದೃಷ್ಟ ಚೆನ್ನಾಗಿತ್ತು. ಹಾಗಾಗಿ ಸಿಕ್ಕ ಸಣ್ಣ ಅವಕಾಶವನ್ನು ಬಳಿಸಿಕೊಂಡು ವಿಮಾನದಿಂದ ಹಾರಿ ಹೊರಬಂದು ಬದುಕುಳಿದೆ. ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ತಲುಪಲು ಸ್ಥಳೀಯ ನಿವಾಸಿಗಳು ನನಗೆ ಸಹಾಯ ಮಾಡಿದ್ದರು. ಅಲ್ಲಿ ನನ್ನ ಕುಟುಂಬಸ್ಥರು ಕಾದು ನಿಂತಿದ್ದರು. ಅವರಿಗೆ ಅಪಘಾತದ ಬಗ್ಗೆ ತಿಳಿದಿರಲಿಲ್ಲ. ಬಳಿಕ ದುರಂತದ ಬಗ್ಗೆ ತಿಳಿಸಿದಾಗ ಸ್ಥಳದಲ್ಲಿದ್ದ ಇತರರು ತಮ್ಮ ಪ್ರೀತಿಪಾತ್ರರು ಬದುಕುಳಿದಿದ್ದಾರೆಯೇ ಎಂದು ತಿಳಿಯಲು ಓಡಲು ಆರಂಭಿಸಿದರು. ನಂತರ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಗಾಯ ಹಾಗೂ ಮಾನಸಿಕ ಆಘಾತದಿಂದಾಗಿ ಆಗ ನನಗೆ ಸಿಕ್ಕಿದ್ದ ಕೆಲಸವನ್ನು ಕಳೆದುಕೊಂಡಿದ್ದೆ. ಇದೀಗ ದುಬೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕಾರ್ಖಾನೆ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದೇನೆ. ಈಗಲೂ ವಿಮಾನದಲ್ಲಿ ಒಬ್ಬನೇ ಹೋಗಲು ಭಯವಾಗುತ್ತದೆ. ಯಾರಾದರೂ ನನ್ನೊಂದಿಗೆ ಬರಬೇಕು. ಇಲ್ಲದಿದ್ದರೆ ನಾನು ಹೋಗುವುದೇ ಇಲ್ಲ. ದೇವರ ದಯೆ, ಮನೆಯವರ ಪ್ರಾರ್ಥನೆಯಿಂದ ಬದುಕಿ ಉಳಿದಿದ್ದೇನೆ.. ಪ್ರತಿ ಬಾರಿ ಮಂಗಳೂರಿಗೆ ಬರುವಾಗ ಇಂದಿಗೂ ಆ ನೆನಪು ಕಾಡದೇ ಬಿಡದು ಎಂದು ಹೇಳಿದ್ದಾರೆ.
Advertisement