
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಫೋಸ್ಟ್ ಹಾಕಿರುವ ಹಾದಿಮನಿ ಎಂಬುವರನ್ನು ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನ್ನು ಟಿ.ಎಫ್.ಹಾದಿಮನಿ ಹರಿಬಿಟ್ಟಿದ್ದಾರೆ. ಮೋದಿ ಅವರ ಬಗ್ಗೆ ಕೋಟ್ಯಂತರ ಜನರು ಗೌರವ- ಅಭಿಮಾನ ಹೊಂದಿದ್ದು, ಅವರ ಮನಸ್ಸಿಗೆ ಈ ಪೋಸ್ಟ್ ನೋಡಿ ನೋವಾಗಿದೆ ಎಂದು ತಿಳಿಸಿದರು. ಇದು ಮೋದಿಯವರಿಗೆ ಕೆಟ್ಟ ಹೆಸರು ತರುವ ದೊಡ್ಡ ತಪ್ಪು ಎಂದು ಆಕ್ಷೇಪಿಸಿದರು.
ಮೋದಿಯವರ ಚಾರಿತ್ರ್ಯವಧೆ ಮಾಡುವ ಹಾದಿಮನಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಯಶವಂತಪುರದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ರಾಜ್ಯ ವಕ್ತಾರ ಮತ್ತು ವಕೀಲ ವೆಂಕಟೇಶ ದೊಡ್ಡೇರಿ ಅವರು ದೂರುದಾರ ಎಂದು ತಿಳಿಸಿದರು. ಎಫ್‍ಐಆರ್ ಮಾಡುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ವಿವರಿಸಿದರು.
ನಿವೃತ್ತ ಪೊಲೀಸ್ ಆಯುಕ್ತ ಮತ್ತು ಪಕ್ಷದ ಮುಖಂಡ ಭಾಸ್ಕರ ರಾವ್ ಅವರು ಮಾತನಾಡಿ, ಪ್ರಧಾನಿಯವರನ್ನು ಅವಮಾನ ಮಾಡಿದ್ದು ಖಂಡನೀಯ. ಹಾದಿಮನಿ ಬಂಧನಕ್ಕೆ ಕೋರಿದ್ದೇವೆ. ಇಂಥ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಿದ್ದಾಗಿ ಹೇಳಿದರು.
ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ ಮಾತನಾಡಿ, ಮೋದಿ ಅವರ ವಿರುದ್ಧ ಹಾದಿಮನಿ, ಫೇಸ್ ಬುಕ್‍ನಲ್ಲಿ ಹಾಕಿರುವ ಪೋಸ್ಟ್ ಸಮಾಜದಲ್ಲಿ ಶಾಂತಿ- ಸುವ್ಯವಸ್ಥೆಯನ್ನು ಕದಡುವಂತಿದೆ. ಜನರ ಭಾವನೆಗೆ ಇದರಿಂದ ಧಕ್ಕೆಯಾಗಿದೆ. ಅವರು ಇಂಥ ಅವಹೇಳನಕಾರಿ ಪೋಸ್ಟ್‍ಗಳನ್ನು ನಿರಂತರವಾಗಿ ಹಾಕುತ್ತಿದ್ದಾರೆ ಎಂದು ಟೀಕಿಸಿದರು. ಅವರನ್ನು ಬಂಧಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾಗಿ ತಿಳಿಸಿದರು.
Advertisement