
ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಿಂದ ಥಳಿಸಿ ಭಾರಿ ವಿವಾದಕ್ಕೆ ಕಾರಣವಾಗಿರುವ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರು, ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಟೀಕಿಸಿದ್ದಕ್ಕೇ ಸಿಬ್ಬಂದಿಯನ್ನು ಥಳಿಸಿದೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಶಿವಸೇನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಮೊದಲು ಕೈ ಎತ್ತಿದ್ದು ಸಿಬ್ಬಂದಿ ಆ ಬಳಿಕವಷ್ಟೇ ಸಂಸದ ರವೀಂದ್ರ ಗಾಯಕ್ವಾಡ್ ಅವರು ಹಲ್ಲೆ ನಡೆಸಿದ್ದು ಎಂದು ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಸಂಸದ ರವೀಂದ್ರ ಗಾಯಕ್ವಾಡ್ ಅವರು, ಸುಮಾರು 4 ಪುಟಗಳ ಸ್ಪಷ್ಟನೆ ನೀಡಿದ್ದಾರೆ. ಇದರಲ್ಲಿ ಪ್ರತೀ ಘಟನೆಯ ಹಿಂದೆಯೂ ಒಂದು ಪ್ರಚೋದನಾತ್ಮಕ ಕ್ರಿಯೆಗಳಿರುತ್ತವೆ ಎಂದು ಗಾಯಕ್ವಾಡ್ ಹೇಳಿದ್ದಾರೆ. ಅಂತೆಯೇ ಏರ್ ಇಂಡಿಯಾ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿದ್ದರಿಂದಲೇ ತಾವು ಆಕ್ರೋಶಗೊಂಡು ಹಲ್ಲೆ ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ತಾವು ದೆಹಲಿಗೆ ಪ್ರಯಾಣ ಮಾಡಲು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದು, ವಿಮಾನದಲ್ಲಿ ಬಿಸಿನೆಸ್ ಕ್ಲಾಸ್ ಸೀಟ್ ಇಲ್ಲ ಎಂದಾದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿದ್ದೇಕೆ. ಕನಿಷ್ಠ ಪಕ್ಷ ಯಾವುದೇ ವಿಮಾನಯಾನ ಅಧಿಕಾರಿಗಳೂ ಈ ಬಗ್ಗೆ ಮಾಹಿತಿ ನೀಡಲಿಲ್ಲ. ಈ ಬಗ್ಗೆ ದೂರು ನೀಡಲು ದೂರು ಪುಸ್ತಿಕೆ ಕೇಳಿದರೆ ಸಿಬ್ಬಂದಿ ಅದನ್ನು ನೀಡದೇ ನಿರ್ಲಕ್ಷ್ಯ ಧೋರಣೆ ತೋರಿದರು. ಒಂದು ಸಣ್ಣ ಪೇಪರ್ ಚೂರಿನಲ್ಲಿ ನಾನು ದೂರು ಬರೆಯಬೇಕಾಯಿತು. ಸಿಬ್ಬಂದಿಯನ್ನು ಕೇಳಿದಾಗ ಅವರ ನಿರ್ಲಕ್ಷದ ನಡವಳಿಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಟೀಕೆಗಳು ನನ್ನ ಕೋಪ ನೆತ್ತಿಗೇರುವಂತೆ ಮಾಡಿತು. ಹೀಗಾಗಿ ಥಳಿಸಿದೆ ಎಂದು ಗಾಯಕ್ವಾಡ್ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಥಳಿತಕ್ಕೊಳಗಾದ ಸಿಬ್ಬಂದಿ ಸುಕುಮಾರ್ ರಮಣ್ ಅವರು ಹೇಳುವಂತೆ, ವಿಮಾನಕ್ಕೆ ಆಗಮಿಸುವ ಮುನ್ನವೇ ರವೀಂದ್ರ ಗಾಯಕ್ವಾಡ್ ಅವರು ಆಕ್ರೋಶ ಭರಿತರಾಗಿ ಬಂದಿದ್ದರು. ನಮ್ಮ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಅವರು ಇರಲಿಲ್ಲ ಎಂದು ಹೇಳಿದ್ದಾರೆ.
Advertisement