
ಬೆಂಗಳೂರು: ಕರ್ನಾಟಕದ ಮನೆ ಮನೆ ಮಾತಾಗಿರುವ ಹಾಗೂ ಹೈನುಗಾರಿಕೆಗೆ ಜೀವನಾಡಿ ಆಗಿರುವ ನಂದಿನಿ ಹಾಲು ಮತ್ತು ನಂದಿನ ಉತ್ಪನ್ನಗಳನ್ನು ರಾಜ್ಯ ಸರ್ಕಾರವೇ ಕಡೆಗಣಿಸುತ್ತಿದೆ ಎನ್ನುವ ಚರ್ಚೆ ಮತ್ತೆ ಶುರುವಾಗಿದೆ.
ಇದಕ್ಕೆ ಕಾರಣ ಬೆಂಗಳೂರಿನ ಮೆಟ್ರೋದಲ್ಲಿ ಅಮೂಲ್ ಉತ್ಪನ್ನಗಳ ಮಳಿಗೆ ಪ್ರಾರಂಭಿಸುವುದಕ್ಕೆ ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿರುವುದು.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇತ್ತೀಚೆಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ನಿಲ್ದಾಣಗಳಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದೆ.
ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್), ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿ ನಿಲ್ದಾಣಗಳಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಅಮುಲ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಕಿಯೋಸ್ಕ್‌ಗಳು ಅಮುಲ್‌ನ ಡೈರಿ ಉತ್ಪನ್ನಗಳು, ಚಾಕೊಲೇಟ್, ಆಲೂಗಡ್ಡೆ ಆಧಾರಿತ ತಿಂಡಿಗಳು, ಸಾವಯವ ಉತ್ಪನ್ನಗಳು ಮತ್ತು ಖಾದ್ಯ ತೈಲಗಳ ಸಂಪೂರ್ಣ ಶ್ರೇಣಿಯನ್ನು ಮಾರಾಟ ಮಾಡುತ್ತವೆ" ಎಂದು ಜೂನ್ 16 ರಂದು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗ ಮೆಟ್ರೋ ಪ್ರಯಾಣಿಕರು ಹಾಲು, ಚಾಕೊಲೇಟ್‌ಗಳು, ಐಸ್ ಕ್ರೀಮ್, ಇನ್‌ಸ್ಟಂಟ್ ಫುಡ್ ಪ್ರಾಡಕ್ಟ್ ಮತ್ತು ತಮ್ಮ ಆಯ್ಕೆಯ ತಿಂಡಿಗಳನ್ನು ಖರೀದಿಸಬಹುದು ಎಂದು ತಿಳಿಸಲಾಗಿದೆ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಮುಲ್ ಬೆಂಗಳೂರಿನಲ್ಲಿ ಪ್ರವೇಶಿಸುವ ನಿರ್ಧಾರ ರಾಜಕೀಯ ಗುದ್ದಾಟಕ್ಕೆ ಸಾಕ್ಷಿಯಾಗಿತ್ತು.
ಈ ವೇಳೆ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರಾಗಿ ಕಿಡಿಕಾರಿತ್ತು. ಕರ್ನಾಟಕದ ಡೈರಿ ಪರಿಸರ ವ್ಯವಸ್ಥೆ ಮತ್ತು ಲಕ್ಷಾಂತರ ಸ್ಥಳೀಯ ರೈತರನ್ನು ಬಲಿಕೊಟ್ಟು ಗುಜರಾತ್ ಮೂಲದ ಅಮುಲ್ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿತ್ತು. ಇದೀಗ ಸ್ವತಃ ಕಾಂಗ್ರೆಸ್ ಸರ್ಕಾರವೇ ಅಮುಲ್'ಗೆ ಅವಕಾಶ ಮಾಡಿಕೊಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರದ ಈ ನಡೆಯನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದೆ. ಕಮಿಷನ್ ಆಸೆಗೆ ಸ್ವಾಭಿಮಾನ ಮಾರಿಕೊಂಡ ಡಿಕೆ.ಶಿವಕುಮಾರ್. ಡೂಪ್ಲಿಕೇಟ್ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ ಎಂದು ಹೇಳಿದೆ.
ಚುನಾವಣೆಗೂ ಮುಂಚೆ #SaveNandini , ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಪುಂಗೀ ಬಿಡುತ್ತಿದ್ದ ಡಿಕೆಶಿ, ಕಮಿಷನ್ ಆಸೆಗೆ ಇಂದು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ. ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ.
ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ ಅನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಮರೆತು, ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ರತ್ನ ಕಂಬಳಿ ಹಾಸಿದೆ. ನಂದಿನಿ ಹಾಲಿನ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಮಾರುಕಟ್ಟೆ ಸೃಷ್ಟಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಕನ್ನಡಿಗರ ಹೆಮ್ಮೆಯ ಬ್ರಾಂಡ್ "ನಂದಿನಿ"ಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ. ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ, ನಮ್ಮ ಸ್ವಾಭಿಮಾನ ಅಡವಿಡಲು ಸಿದ್ಧರಿಲ್ಲ ನಂದಿನಿ ಕನ್ನಡಿಗರ ನಾಡಿ ಮಿಡಿತ ಬಿಜೆಪಿಯ ಕೊನೆಗಾಲ ಸನ್ನಿಹಿತ ಎಂದು ಹೇಳಿದೆ.
ಇದೇ ವಳೆ #SaveNandini ಎಂದು ಈ ಹಿಂದೆ ಡಿ.ಕೆ ಶಿವಕುಮಾರ್ ಅವರು ಹೇಳಿದ್ದ ಪೋಸ್ಟ್ ವೊಂದನ್ನೂ ಜೆಡಿಎಸ್ ಹಂಚಿಕೊಂಡಿದೆ.
Advertisement