ವಿದ್ಯುತ್ ಪ್ರಸರಣ ಇಲಾಖೆ: ಖಾಲಿ ಇರುವ 35,000 ಹುದ್ದೆಗಳು ಹಂತ ಹಂತವಾಗಿ ಭರ್ತಿ- ಸಿಎಂ ಸಿದ್ದರಾಮಯ್ಯ

ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ 'ವಜ್ರ ಮಹೋತ್ಸವ' ಉದ್ಘಾಟಿಸಿ, ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ 532 ಮಂದಿ ಪೌರ ಕಾರ್ಮಿಕರ ಹುದ್ದೆಗಳನ್ನು ಕಾಯಂ ಮಾಡುತ್ತೇವೆ ಎಂದರು.
CM Siddaramaiah and DCM DK Shivakumar
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತಿತರರು
Updated on

ಬೆಂಗಳೂರು: ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35,000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಿಸಿದರು.

ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ 'ವಜ್ರ ಮಹೋತ್ಸವ' ಉದ್ಘಾಟಿಸಿ, ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ, ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆಗಳನ್ನು ಕಾಯಂ ಮಾಡುತ್ತೇವೆ ಎಂದರು.

ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಎನ್‌ಪಿಎಸ್ ಜಾರಿ ಮಾಡಿದ್ದು ಕೇಂದ್ರ ಸರ್ಕಾರ. ನಾವು ಒಪಿಎಸ್ ಜಾರಿಯನ್ನು ಪ್ರಣಾಳಿಕೆಯಲ್ಲೇ ಘೋಷಿಸಿದ್ದೇವೆ. ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

1964ರಲ್ಲಿ ಆರಂಭವಾದ ನೌಕರರ ಸಂಘ ಇಷ್ಟು ಸುದೀರ್ಘ ಕಾಲ ನಿರಂತರವಾಗಿ ನೌಕರರ ಕಷ್ಟ ಸುಖಗಳಿಗೆ ಸ್ಪಂದಿಸಿ, ಪ್ರಾಮಾಣಿಕ ಹೋರಾಟ ನಡೆಸುತ್ತಿದೆ. ಜೊತೆಗೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ. ಇದಕ್ಕೆ ನೀವೆಲ್ಲರೂ ಅಭಿನಂದನಾರ್ಹರು ಎಂದರು.

ಇಡೀ ಏಷ್ಯಾದಲ್ಲಿ ಮೊದಲಿಗೆ ವಿದ್ಯುತ್ ಉತ್ಪಾದನೆ ಆಗಿದ್ದು 1902 ರಲ್ಲಿ ಕರ್ನಾಟಕದಲ್ಲಿ. 1905 ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ವಿದ್ಯುತ್ ಸರಬರಾಜು ಕಂಪನಿ ಆರಂಭಿಸಲಾಯಿತು. 1908 ರಲ್ಲಿ ಮೊದಲ ಬಾರಿ ಅರಮನೆಗೆ ವಿದ್ಯುತ್ ಬಂತು. ಅಲ್ಲಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಾ, ಇಂದು 34,000 ಮೆಗಾ ವ್ಯಾಟ್ ಉತ್ಪಾದನೆ ಮಾಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ ಎಂದು ತಿಳಿಸಿದರು.

ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗುತ್ತಿರುವುದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿರುವ ಕಾರಣಕ್ಕೇ. ರೈತರ ಕೃಷಿಗೆ ಪಂಪ್ ಸೆಟ್ ಗಳಿಗೆ ಹಗಲಲ್ಲೂ 7 ಗಂಟೆ ಅಗತ್ಯ ವಿದ್ಯುತ್ ಸರಬರಾಜು ಮಾಡಲು ಶಕ್ತರಾಗುತ್ತೇವೆ. ಈ ಗುರಿ ಇಟ್ಟುಕೊಂಡು ಕೆಲಸಗಳು ನಡೆಯುತ್ತಿವೆ. 60,000 ಮೆಗಾ ವ್ಯಾಟ್ ಉತ್ಪಾದನೆ ಗುರಿ ನಾವು ತಲುಪಿದ ತಕ್ಷಣ ಇದು ಸಾಧ್ಯವಾಗಲಿದೆ. ವಿದ್ಯುತ್ ಪ್ರಮುಖ ಕಚ್ಚಾವಸ್ತು ಎನ್ನುವುದನ್ನು ನಾವು ಮರೆಯಬಾರದು. ನೌಕರರು ಮತ್ತು ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಲು ಸರ್ಕಾರ ಸಿದ್ಧವಿದೆ ಎಂಬ ಭರವಸೆ ನೀಡಿದರು.

CM Siddaramaiah and DCM DK Shivakumar
ಮಾವು ಬೆಳೆಗಾರರ ಆಕ್ರೋಶಕ್ಕೆ ಹೆದರಿದ ಸರ್ಕಾರ: ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ವಿಧಾನಸೌಧಕ್ಕೆ ಸ್ಥಳಾಂತರ!

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಯಾವುದೇ ಕಾರಣಕ್ಕೂ ವಿದ್ಯುತ್ ಪ್ರಸರಣ ಕಂಪನಿಗಳನ್ನು (ESCOMs) ಸರ್ಕಾರ ಖಾಸಗೀಕರಣ ಮಾಡಲ್ಲ ಎಂದು ಸ್ಪಷ್ಪಪಡಿಸಿದರು. ಈ ಹಿಂದೆ ಇಂಧನ ಸಚಿವರಾಗಿದ್ದ ಅವಧಿಯಲ್ಲಿ ವಿಶೇಷವಾಗಿ ಬಿಜೆಪಿ ಸರ್ಕಾರ ಮುಂಬೈ, ದೆಹಲಿ ಮತ್ತು ಇತರ ನಗರಗಳಲ್ಲಿ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಿದ ನಂತರ ರಾಜ್ಯದಲ್ಲೂ ಖಾಸಗೀಕರಣಕ್ಕೆ ಕೇಂದ್ರದಿಂದ ಹೆಚ್ಚಿನ ಒತ್ತಡ ಇತ್ತು. ಆದರೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಗಮದ ಸಿಬ್ಬಂದಿಯ ದಕ್ಷತೆಗೆ ಬೆಂಬಲವಾಗಿ ನಿಂತಿದ್ದೇನೆ ಎಂದರು.

ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 11,000 ಮೆಗಾವ್ಯಾಟ್‌ನಿಂದ 23,000 ಮೆಗಾವ್ಯಾಟ್‌ಗೆ ದ್ವಿಗುಣಗೊಂಡಿತ್ತು. ಪಾರದರ್ಶಕ ಪ್ರಕ್ರಿಯೆಯ ಮೂಲಕ 24,000 ಉದ್ಯೋಗಿಗಳನ್ನು ನೇಮಕ ಮಾಡಲಾಯಿತು. ಪಾವಗಡ ಸೋಲಾರ್ ಪಾರ್ಕ್‌ ಸ್ಥಾಪನೆಯಲ್ಲಿ ಸರ್ಕಾರ ಭೂ ಸ್ವಾಧೀನಪಡಿಸಿಕೊಳ್ಳುವುದಕ್ಕಿಂತ ಭೂ-ಲೀಸಿಂಗ್ ಮಾದರಿಯನ್ನು ಅಳವಡಿಸಿಕೊಂಡಿದೆ. ಇದು ರೈತರಿಗೆ ಮಾಲೀಕತ್ವವನ್ನು ಉಳಿಸಿಕೊಳ್ಳಲು ಮತ್ತು ವಾರ್ಷಿಕ ಬಾಡಿಗೆ ಆದಾಯವನ್ನು ಗಳಿಸಲು ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com