News Headlines 19-06-25 | ವಸತಿ ಯೋಜನೆಯಲ್ಲೂ ಮುಸ್ಲಿಮರ ಮೀಸಲಾತಿ ಹೆಚ್ಚಳ; HDK ವಿರುದ್ಧದ ತನಿಖೆಗೆ SIT ರಚನೆ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ; ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ 5 ದಿನದ ಬಳಿಕ ಸಾವು!

News Headlines 19-06-25 | ವಸತಿ ಯೋಜನೆಯಲ್ಲೂ ಮುಸ್ಲಿಮರ ಮೀಸಲಾತಿ ಹೆಚ್ಚಳ; HDK ವಿರುದ್ಧದ ತನಿಖೆಗೆ SIT ರಚನೆ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ; ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ 5 ದಿನದ ಬಳಿಕ ಸಾವು!

1. ವಸತಿ ಯೋಜನೆಯಲ್ಲೂ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿ ಬೆಟ್ಟದಲ್ಲಿ ಜೂನ್ 19ರಂದು ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ. ಮಾವು ರೈತರ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸಿರುವುದನ್ನು ವಿರೋಧಿಸಿ ಸಚಿವ ಸಂಪುಟ ಸಭೆ ವೇಳೆ ಜೆಡಿಎಸ್ ನೇತೃತ್ವದಲ್ಲಿ ನಂದಿ ಹಿಲ್ಸ್‌ನಲ್ಲಿ ಪ್ರತಿಭಟನೆ ನಡೆಸಲು ರೈತರು ಯೋಜಿಸಿದ್ದರು. ಇದರಿಂದ ಆಗುವ ಮುಜುಗರಿಂದ ತಪ್ಪಿಸಿಕೊಳ್ಳಲು ಸರ್ಕಾರ ಸಚಿವ ಸಂಪುಟ ಸಭೆಯನ್ನು ಸರ್ಕಾರಿ ಯೋಜನೆಗಳ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ ಬಳಿಕ ಈಗ ವಸತಿ ಯೋಜನೆಯಲ್ಲೂ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ಮಹತ್ವದ ತೀರ್ಮಾನ ಮಾಡಿದೆ. ವಸತಿಯೋಜನೆಯಡಿ ಮುಸ್ಲಿಂ ಸೇರಿದಂತೆ ಇತರೆ ಅಲ್ಪ ಸಂಖ್ಯಾತರಿಗೆ ಮೀಸಲಾತಿಯನ್ನು ಶೇ.10ರಿಂದ ಶೇ.15ಕ್ಕೆ ಏರಿಸಲು ಸಚಿವ ಸಂಪುಟ ಅಸ್ತು ಎಂದಿದೆ. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು "ಸ್ಪಷ್ಟವಾಗಿ ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ" ಎಂದು ಬಿಜೆಪಿ ಗುರುವಾರ ಕರೆದಿದೆ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ಮತಬ್ಯಾಂಕ್ ರಾಜಕೀಯವನ್ನು "ಪೋಷಿಸಲು" ಹಿಂದೂಗಳ ಹಕ್ಕುಗಳನ್ನು ಕದಿಯುತ್ತಿದೆ ಎಂದು ಆರೋಪಿಸಿದೆ.

2. ನಾಲ್ಕು ಮಸೂದೆಗಳನ್ನು ರೂಪಿಸಲು ಪ್ರಸ್ತಾಪಿಸ: ಎಚ್ ಕೆ ಪಾಟೀಲ್

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂದು ನಾಲ್ಕು ಮಸೂದೆಗಳನ್ನು ರೂಪಿಸಲು ಪ್ರಸ್ತಾಪಿಸಲಾಯಿತು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ. ಕರ್ನಾಟಕ ಜನಸಂದಣಿ ನಿಯಂತ್ರಣ, ಕಾರ್ಯಕ್ರಮಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವುದು ಮತ್ತು ಸಾಮೂಹಿಕ ಸಭೆ ನಡೆಯುವ ಸ್ಥಳ ಮಸೂದೆ; ಕರ್ನಾಟಕ ರೋಹಿತ್ ವೇಮುಲಾ ಮಸೂದೆ; ಕರ್ನಾಟಕ ತಪ್ಪು ಮಾಹಿತಿ, ನಕಲಿ ಸುದ್ದಿ ನಿಷೇಧ ಮಸೂದೆ; ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆಗಟ್ಟುವಿಕೆ ಮಸೂದೆ 2025 ಅನ್ನು ಪ್ರಸ್ತಾಪಿಸಲಾಗಿದೆ ಎಂದು ಎಚ್ ಕೆ ಪಾಟೀಲ್ ತಿಳಿಸಿದರು.

3. ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ 5 ದಿನದ ಬಳಿಕ ಸಾವು

ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಬೈಕ್ ಹೋಗುತ್ತಿದ್ದಾಗ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ 29 ವರ್ಷದ ಅಕ್ಷಯ್, ಐದು ದಿನಗಳಿಂದ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದು ಅಕ್ಷಯ್ ಬ್ರೇನ್ ಡೆಡ್ ಆಗಿದೆ ಎಂದು ನಿನ್ನೆ ವೈದ್ಯರು ತಿಳಿಸಿದ್ದರು. ಅಕ್ಷಯ್ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು, ಕಿಮ್ಸ್ ಆಸ್ಪತ್ರೆಗೆ ಅಕ್ಷಯ್ ನೇತ್ರದಾನಕ್ಕೆ ಮುಂದಾಗಿದ್ದಾರೆ. ಮೃತ ಅಕ್ಷಯ್ ಕುಟುಂಬಕ್ಕೆ ಬಿಬಿಎಂಪಿ ಚಿಕಿತ್ಸಾ ವೆಚ್ಚದ ಹೊರತುಪಡಿಸಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಅಕ್ಷಯ್ ಸಾವಿನಿಂದ ಕಂಗೆಟ್ಟಿರುವ ಕುಟುಂಬಸ್ಥರು ಅಕ್ಷಯ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸುತ್ತಿದ್ದಾರೆ.

4. ಥಗ್ ಲೈಫ್ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕೈಗೊಳ್ಳಿ

ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ನಿರ್ಮಾಪಕರು ರಾಜ್ಯದಲ್ಲಿ ಚಿತ್ರ ಪ್ರದರ್ಶಿಸಲು ನಿರ್ಧರಿಸಿದರೆ ಚಿತ್ರಮಂದಿರಗಳಿಗೆ ಸಾಕಷ್ಟು ಭದ್ರತೆ ಒದಗಿಸುವುದಾಗಿ ರಾಜ್ಯ ಸರ್ಕಾರ ನೀಡಿದ ಭರವಸೆಯನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ಪೀಠ ದಾಖಲಿಸಿಕೊಂಡಿದೆ. ಒಬ್ಬರ ಹೇಳಿಕೆಯಿಂದ ಮತ್ತೊಬ್ಬರ ಭಾವನೆಗಳಿಗೆ ನೋವುಂಟಾಗಿದೆ ಎಂಬ ಕಾರಣಕ್ಕಾಗಿ ಚಿತ್ರ ಬಿಡುಗಡೆಯನ್ನು ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಪೀಠ ಹೇಳಿದೆ. ಇನ್ನು ಥಗ್ ಲೈಫ್ ಚಿತ್ರದ ಕರ್ನಾಟಕದ ರೈಟ್ಸ್ ತೆಗೆದುಕೊಂಡಿರುವ ವಿತರಕ ಮಂಜುನಾಥ್ ಅವರು ತಮಿಳುನಾಡಿನಲ್ಲಿ ಚಿತ್ರ ಸೋತಿದೆ. ಈಗಿರುವಾಗ ಕರ್ನಾಟಕದಲ್ಲಿ ಗಳಿಕೆ ಮಾಡುತ್ತದೆ ಎಂಬ ನಂಬಿಕೆ ನನಗೆ ಇಲ್ಲ ಎಂದು ಹೇಳಿದ್ದಾರೆ.

5. HDK ವಿರುದ್ಧದ ತನಿಖೆಗೆ ಎಸ್ಐಟಿ ರಚನೆಯ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಸರ್ಕಾರಿ ಜಮೀನು ಒತ್ತುವರಿ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧ ಎಸ್ಐಟಿ ತನಿಖೆ ಪ್ರಶ್ನಿಸಿ HD ಕುಮಾರಸ್ವಾಮಿ ಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ಸರ್ಕಾರಿ ಅಧಿಸೂಚನೆಯಿಲ್ಲದೆ ಎಸ್.ಐ.ಟಿ ರಚನೆ ಕಾನೂನುಬಾಹಿರ ಎಂದು ಕುಮಾರಸ್ವಾಮಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ಅನೂರ್ಜಿತ ಎಂದು ಘೋಷಿಸಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com