ಬೆಳಗಾವಿ: 30 ವರ್ಷಗಳ ಹಿಂದಿನ ಲಂಚ ಪ್ರಕರಣ; ಸ್ಪೆಷಲ್ ಕೋರ್ಟ್ ಶಿಕ್ಷೆ ಎತ್ತಿ ಹಿಡಿದ 'ಸುಪ್ರೀಂ', ಗ್ರಾಮಲೆಕ್ಕಿಗನ ಬಂಧನ

1995ರಲ್ಲಿ ಕಡೋಲಿ ರೈತ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಅವರು ತಮ್ಮ ಸಹೋದರನೊಂದಿಗೆ ಜಮೀನು ಹಂಚಿಕೆ (ವಾಟ್ನಿ) ಮಾಡಿ ಉತಾರ ಕೊಡಲು ಅರ್ಜಿ ಸಲ್ಲಿಸಿದ್ದರು.
Supreme Court
ಸುಪ್ರೀಂಕೋರ್ಟ್
Updated on

ಬೆಳಗಾವಿ: 30 ವರ್ಷಗಳ ಹಿಂದಿನ ಲಂಚ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ, ಈ ಹಿನ್ನೆಲೆಯಲ್ಲಿ ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಮಾಜಿ ಗ್ರಾಮ ಲೆಕ್ಕಿಗ ನಾಗೇಶ್ ಡೊಂಡು ಶಿವಂಗೆಕರ್ ಎಂಬಾತನನ್ನು ಬಂಧಿಸಲಾಯಿತು.

1995ರಲ್ಲಿ ಕಡೋಲಿ ರೈತ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಅವರು ತಮ್ಮ ಸಹೋದರನೊಂದಿಗೆ ಜಮೀನು ಹಂಚಿಕೆ (ವಾಟ್ನಿ) ಮಾಡಿ ಉತಾರ ಕೊಡಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ‌‌‌‌ ಗ್ರಾಮಲೆಕ್ಕಿಗ 500 ರು. ಲಂಚ ಕೇಳಿದ್ದರು. ಇದನ್ನು ರೈತ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು. ಜಾಲ ಬೀಸಿದ ಅಧಿಕಾರಿಗಳು ಲಂಚ ಪಡೆಯುವಾಗ ಬಂಧಿಸಿದ್ದರು.

ಆಗಿನ ಬೆಳಗಾವಿ ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಎಂ.ಎಸ್‌. ದಂಡಿನ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯವು 2006ರ ಜೂನ್‌ 14ರಂದು ನಾಗೇಶಗೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ 1,000 ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ನಾಗೇಶ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. 2012ರ ಮಾರ್ಚ್‌ 9ರಂದು ಹೈಕೋರ್ಟ್‌, ನಾಗೇಶ ನಿರಪರಾಧಿ ಎಂದು ತೀರ್ಪು ನೀಡಿತ್ತು.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಲೋಕಾಯುಕ್ತ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೇ ಏಪ್ರಿಲ್‌ 16ರಂದು ಸುಪ್ರೀಂಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸಿತು. ಅಲ್ಲದೇ ಬೆಳಗಾವಿ ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿಯಿತು. ಆಪಾದಿತನ ವಿರುದ್ಧ ಬಂಧನ ವಾರಂಟ್‌ ಹೊರಡಿಸಲಾಗಿತ್ತು. ಆದೇಶದಂತೆ ಬುಧವಾರ ಬಂಧಿಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು 10 ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾದ 70 ವರ್ಷದ ನಾಗೇಶ್ ದೊಂಡು ಶಿವಂಗೇಕರ್ ಅವರನ್ನು ಬಂಧಿಸಿದರು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸದ್ಯ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Supreme Court
ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರಿಗೆ ನ್ಯಾಯ ಒದಗಿಸಿ ಕೊಡಿ: ಕೇಂದ್ರ-ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com