
ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ರೇಂಜ್ ಬಳಿ ಗುರುವಾರ ಮಧ್ಯಾಹ್ನ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಕಳೆದ ಒಂಬತ್ತು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ.
ದೇಶಿಪುರ ಕಾಲೋನಿಯ ಪುಟ್ಟಮ್ಮ (32) ಮೃತಪಟ್ಟ ಮಹಿಳೆ. ದನಗಳನ್ನು ಮೇಯಿಸುತ್ತಿದ್ದಾಗ ಹುಲಿ ಆಕೆಯ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಮಹಿಳೆಯನ್ನು ಕೊಂದ ಹುಲಿ ಸ್ಥಳದಿಂದ 100 ಮೀಟರ್ ದೂರ ಎಳೆದೊಯ್ದಿತ್ತು. ಘಟನೆಯ ಬಗ್ಗೆ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪುಟ್ಟಮ್ಮನನ್ನು ಹುಡುಕಿದಾಗ ದೂರದಲ್ಲಿ ಆಕೆಯ ಶವ ಪತ್ತೆಯಾಗಿದೆ.
ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾತನಾಡಿ, ಮಹಿಳೆ ಹುಲಿ ದಾಳಿಯಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಹಸ್ತಾಂತರಿಸಲಾಗುವುದು. ಹುಲಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಜೂನ್ 10 ರಂದು ಬೆಡಗುಳಿ ಗ್ರಾಮದ (ಬಿಆರ್‌ಟಿ) ವ್ಯಾಪ್ತಿಯ ರಂಗಮ್ಮ ಹುಲಿ ದಾಳಿಯಲ್ಲಿ ಸಾವನ್ನಪ್ಪಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿಯಿತು. ಈಗ, 10 ದಿನಗಳ ಒಳಗೆ ಮತ್ತೊಂದು ಹುಲಿ ದಾಳಿ ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿದೆ.
Advertisement