
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲ್ವೆ ಹಳಿ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು ಶನಿವಾರ ಮುಂಜಾನೆ ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಟ್ಟದಿಂದ ಬಂಡೆಗಳು ಜಾರಿ ಸರಕು ರೈಲುಗಳು ಬಳಸುವ ರೈಲ್ವೆ ಹಳಿಯ ಮೇಲೆ ಬಿದ್ದ ಕಾರಣ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅವರು ಹೇಳಿದರು.
ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಬೆಳಿಗ್ಗೆ 3.40ಕ್ಕೆ ಕಡಗರವಳ್ಳಿಗೆ ಆಗಮಿಸಿತು ಮತ್ತು ಅಡಚಣೆಯಿಂದಾಗಿ ಹೊರಡುವಲ್ಲಿ ವಿಳಂಬವಾಯಿತು.
ಅದೇ ರೀತಿ, ಬೆಳಿಗ್ಗೆ 3.10ಕ್ಕೆ ಸಕಲೇಶಪುರ ತಲುಪಿದ ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್ ಮತ್ತು ಬೆಳಿಗ್ಗೆ 6.26ಕ್ಕೆ ಆಗಮಿಸಿದ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಹ ವಿಳಂಬವಾಯಿತು.
ಈ ಅಡಚಣೆಗೆ ಪ್ರತಿಕ್ರಿಯೆಯಾಗಿ, ರೈಲ್ವೆ ಅಧಿಕಾರಿಗಳು ತೊಂದರೆಗೊಳಗಾದ ರೈಲುಗಳಲ್ಲಿನ ಪ್ರಯಾಣಿಕರಿಗೆ ಕುಡಿಯುವ ನೀರು, ಲಘು ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪ್ರಯಾಣಿಕರು NTES ಅಥವಾ Where is My Train' ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿ ತಮ್ಮ ರೈಲುಗಳ ರಿಯಲ್-ಟೈಂ ನವೀಕರಣಗಳನ್ನು ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಎಕ್ಸ್ ಮೂಲಕವೂ @RailwaySeva ಗೆ ಸಂಪರ್ಕಿಸಬಹುದು ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದು ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಳಿಗೆ ಬಿದ್ದಿದ್ದ ಬಂಡೆ ಮತ್ತು ಮಣ್ಣನ್ನು ತೆರವುಗೊಳಿಸಲಾಗಿದೆ. ರೈಲುಗಳು ಬೆಳಗ್ಗೆ 9 ಗಂಟೆ 10 ನಿಮಿಷದ ಬಳಿಕ ಸಂಚರಿಸಲು ಅನುವು ಮಾಡಿಕೊಡಲಾಗಿದ್ದು, ಈ ಹಳಿಯಲ್ಲಿ 20 ಕಿಮೀ ವೇಗದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
Advertisement