ವಸತಿ ಯೋಜನೆಗಳ ಮನೆ ಹಂಚಿಕೆಗೆ ಲಂಚ ನೀಡಬೇಕು ಎಂದು ತಾವು ಮಾಡಿದ ಆರೋಪವಿರುವ ಆಡಿಯೊ ಬಗ್ಗೆ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಬಹಿರಂಗವಾಗಿ ಮಾತನಾಡಿದ್ದಾರೆ. ಆಡಿಯೋದಲ್ಲಿರುವುದು ನನ್ನದೇ ಧ್ವನಿ, ಆಡಿಯೊದಲ್ಲಿ ಮಾತನಾಡಿರುವುದು ನಾನೇ ಎಂದು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ.ಆರ್ ಪಾಟೀಲ್ ಹೇಳಿದ್ದಾರೆ. ವಸತಿ ಯೋಜನೆಗಳಿಗೆ ನನ್ನ ಕ್ಷೇತ್ರದಿಂದಷ್ಟೆ ಅಲ್ಲ, ಬೇರೆ ಕ್ಷೇತ್ರಗಳಲ್ಲೂ ಮನೆ ಹಂಚಿಕೆ ಮಾಡಲು ಹಣ ನೀಡಬೇಕು ಎಂದು ಹೇಳುವ ಮೂಲಕ ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸತ್ಯ ಹೇಳಿದ್ದೇನೆ. ಈ ರೀತಿ ವಸತಿ ಇಲಾಖೆಯಲ್ಲಿ ನಡೆದಿಲ್ಲವಾದರೆ ಸಚಿವ ಜಮೀರ್ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ. ಈಮಧ್ಯೆ, ಬಿ ಆರ್ ಪಾಟೀಲ್ ಅವರ ಹೇಳಿಕೆಯನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಖಂಡಿಸಿದ್ದಾರೆ. ಅಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಆಡಳಿತದ ನಿರಾಸಕ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಕರ್ನಾಟಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಮತ್ತು ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಬೇಕು ಎಂದೂ ಹೆಚ್ ಕೆ ಪಾಟೀಲ್ ಆಗ್ರಹಿಸಿದ್ದಾರೆ. ಸಂಸದೀಯ ವ್ಯವಹಾರಗಳ ಉಸ್ತುವಾರಿ ವಹಿಸಿರುವ ಹಿರಿಯ ಸಚಿವರು ಜೂನ್ 18 ರಂದು ಏಳು ಪುಟಗಳ ಪತ್ರವನ್ನು ಬರೆದಿದ್ದು, 2007 ಮತ್ತು 2011 ರ ನಡುವೆ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಕೇವಲ ಶೇ 7.6 ರಷ್ಟು ಮಾತ್ರ ತನಿಖೆ ನಡೆಸಲಾಗಿದ್ದು, ಇದರಿಂದಾಗಿ ಸರ್ಕಾರಕ್ಕೆ ಅಂದಾಜು 1.5 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕೆಆರ್ ಪುರದಲ್ಲಿ ವಿದ್ಯುತ್ ಸ್ಪರ್ಶಿಸಿ 10 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಜೂನ್ 15 ರಂದು ನೇಪಾಳ ಮೂಲದ ಅನಂತ್ ಎಂಬ ಬಾಲಕ ತಮ್ಮ ಬಾಡಿಗೆ ಮನೆಯ ಮೂರನೇ ಮಹಡಿಯಲ್ಲಿ ಪೊರಕೆ ಹಿಡಿದು ಆಟವಾಡುತ್ತಿದ್ದಾಗ ಹೈಟೆನ್ಷನ್ ವೈರ್ ಸ್ಪರ್ಶಿಸಿ ಈ ಘಟನೆ ನಡೆದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಜೂ.20 ರಂದು ಸಾವನ್ನಪ್ಪಿದ್ದಾರೆ. ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ, ಕಟ್ಟಡ ಮಾಲೀಕರು, ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯ ಸೆಕ್ಷನ್ 106 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಐಟಿ& ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ತಮಗೆ ಅಮೆರಿಕ ಭೇಟಿಗೆ ಅನುಮತಿ ಸಿಗದಿರುವ ಬಗ್ಗೆ ಸ್ಪಷ್ಟೀಕರಣ ಕೋರಿದ್ದಾರೆ. ಈ ಪತ್ರದ ಪ್ರತಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಈ ಭೇಟಿ ರಾಜ್ಯದಲ್ಲಿ ಸಹಯೋಗಗಳನ್ನು ಬಲಪಡಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿತ್ತು ಎಂದಿದ್ದಾರೆ. ನಾನು ಪ್ರತಿನಿಧಿಸುವ ಕರ್ನಾಟಕದ ಜನರಿಗೆ ನಾನು ಜವಾಬ್ದಾರನಾಗಿರುತ್ತೇನೆ. ಆದ್ದರಿಂದ ನನಗೆ ಈ ಅಧಿಕೃತ ವಿದೇಶ ಭೇಟಿಗೆ ಏಕೆ ಅವಕಾಶ ನೀಡಲಿಲ್ಲ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿಯೇ ಸ್ಪಷ್ಟೀಕರಣ ಕೋರಿದ್ದೇನೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ಕೇಂದ್ರ ಸರ್ಕಾರ ಅನುಮತಿ ವಿಷಯದಲ್ಲಿ ಯುಟರ್ನ್ ಹೊಡೆದಿದ್ದು, ಪ್ರಿಯಾಂಕ್ ಖರ್ಗೆ ಭೇಟಿಗೆ ಅನುಮತಿ ನೀಡಿದೆ. ಸ್ವತಃ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅಮೆರಿಕ ಭೇಟಿಗೆ ಅನುಮತಿ ನೀಡುವ ಹಿಂದಿನ ನಿರ್ಧಾರವನ್ನು ರದ್ದುಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಯಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲ್ವೆ ಹಳಿ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು ಶನಿವಾರ ಮುಂಜಾನೆ ಸ್ಥಗಿತಗೊಳಿಸಲಾಗಿತ್ತು. ಬೆಟ್ಟದಿಂದ ಬಂಡೆಗಳು ಜಾರಿ ಸರಕು ರೈಲುಗಳು ಬಳಸುವ ರೈಲ್ವೆ ಹಳಿಯ ಮೇಲೆ ಬಿದ್ದ ಕಾರಣ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಬೆಳಿಗ್ಗೆ 3.40ಕ್ಕೆ ಕಡಗರವಳ್ಳಿಗೆ ಆಗಮಿಸಿತು ಮತ್ತು ಅಡಚಣೆಯಿಂದಾಗಿ ಹೊರಡುವಲ್ಲಿ ವಿಳಂಬವಾಗಿತ್ತು.
Advertisement