
ಮಂಗಳೂರು: ಭಾಷಾ ವಿವಾದಗಳ ಸೂಕ್ಷ್ಮತೆಯ ನಡುವೆಯೇ ಇದೀಗ ಕನ್ನಡ ಮತ್ತು ತುಳು ಭಾಷಿಕರ ನಡುವೆ ವಾದ - ವಿವಾದ ನಡೆಯುವುದಕ್ಕೆ ರಾಜ್ಯ ಸರ್ಕಾರವೇ ವೇದಿಕೆಯೊಂದನ್ನು ಕಲ್ಪಿಸಿದೆ.
ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಹೊರಡಿಸಿರುವ ದ.ಕ ಜಿಲ್ಲಾ ಪಂಚಾಯತ್ ಸುತ್ತೋಲೆ ಭಾರೀ ವಿವಾದವನ್ನು ಸೃಷ್ಟಿಸಿದೆ.
ಸದ್ಯ ಈ ಸುತ್ತೋಲೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದು, ನಮ್ಮ ನೆಲದ ಭಾಷೆಯನ್ನು ಮಾತನಾಡದಂತೆ ತಡೆ ಹಿಡಿಯುವ ದೊಣ್ಣೆ ನಾಯಕ ಯಾರು ಎಂದು ತುಳು ಹೋರಾಟಗಾರರು ಸಿಡಿದೆದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಇನ್ಮುಂದೆ ತುಳು ಭಾಷೆಯಲ್ಲೇ ಸಭೆಯಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ. ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಆದೇಶವೊಂದನ್ನು ಹೊರಡಿಸಲಾಗಿದೆ. ಇದರಲ್ಲಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತ ನೀಡುವಂತೆ ಪಂಚಾಯತ್ ಅಭಿವೃದ್ಧಿ, ಅಧಿಕಾರಿಯವರಿಗೆ ನಿರ್ದೇಶನ ನೀಡಲು ಕಾರ್ಕಳದ ಯಶಸ್ವಿ ನಾಗರಿಕ ಸೇವಾ ಸಂಘದ ಸಂಚಾಲಕ ಮುರಳೀಧರ್ ಮನವಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮನವಿಯ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಿದೆ ಎಂದು ದ.ಕ. ಜಿಲ್ಲಾ ಪಂಚಾಯತ್‌ನಿಂದ ಆದೇಶ ಮಾಡಲಾಗಿದೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸದಾನಂದ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಈ ಸಂದೇಶವನ್ನು ಹಂಚಿಕೊಂಡಿರುವ ಅವರು, ತುಳು ಭಾಷೆ - ಕನ್ನಡ ನಾಡಿನ ಮಣ್ಣಿನ ಭಾಷೆ. ನಮ್ಮ ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎನ್ನುವ ಸರ್ಕಾರದ ಆದೇಶ! ಹಾಗಾದರೆ, ಉರ್ದು ಭಾಷೆಯ ಬಳಕೆ ಸರಕಾರೀ ಕಡತದಲ್ಲಿ ಮಾಡಬಹುದೇ ? ಮಿಸ್ಟರ್ ಟ್ರೊಲ್ ಮಿನಿಸ್ಟರ್ ಎಲ್ಲಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಸೇರಿದಂತೆ ಶಾಸಕರೆಲ್ಲ ತುಳುವಿನಲ್ಲಿ ಸಂವಹನ ಮಾಡಬಹುದಾದರೆ ಗ್ರಾಮ ಪಂಚಾಯತಿಗಳಲ್ಲಿ ತುಳು ಮಾತನಾಡಬಾರದೆಂದರೆ ಏನರ್ಥ? ಈ ಸರ್ಕಾರಕ್ಕೆ ಏನಾಗಿದೆ ಎಂಬುದೇ ಅರ್ಥ ಆಗುತ್ತಿಲ್ಲ. ಗ್ರಾಮ ಪಂಚಾಯತಿಗಳಲ್ಲಿ ಸ್ಥಳೀಯ ಭಾಷೆಯಲ್ಲೇ ವ್ಯವಹರಿಸಬೇಕೇ ಹೊರತು ಇದೇ ಭಾಷೆ ಮಾತಾಡಬೇಕು ಎಂದು ಹೇರಿಕೆ ಮಾಡುವುದು ಸರಿಯಲ್ಲ. ಎಂಕ್ಲೆನ ಪೆರ್ಮೆದ ತುಳುವನಾಡ್, ತುಳು ಭಾಷೆ ಎಂಕ್ಲೆನ ಪೆರ್ಮೆ.’ ಎಂದು ಹೇಳಿದ್ದಾರೆ.
ಅಧಿಕೃತ ಬಳಕೆಗೆ ಕನ್ನಡ ಕಡ್ಡಾಯವಾಗಿದ್ದರೂ, ಸಭೆಗಳಲ್ಲಿ ಪ್ರಾದೇಶಿಕ ಭಾಷೆಗಳ ಸ್ಥಿತಿಯ ಕುರಿತು ಯಾವುದೇ ಸ್ಪಷ್ಟ ಮಾರ್ಗಸೂಚಿಗಳು ಅಸ್ತಿತ್ವದಲ್ಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು. ಪ್ರತಿ ತಿಂಗಳು, ಇಲಾಖೆಗಳು ಆಡಳಿತದಲ್ಲಿ ಎಷ್ಟು ಸಿಬ್ಬಂದಿ ಕನ್ನಡವನ್ನು ಬಳಸುತ್ತಾರೆ ಎಂಬುದನ್ನು ವರದಿ ಮಾಡಬೇಕು ಎಂದಿದ್ದಾರೆ.
ಕ್ಷೇತ್ರದಲ್ಲಿ ಮತ್ತು ಕಚೇರಿಯಲ್ಲಿ, ಹೆಚ್ಚಿನ ಜನರು ತುಳು ಮಾತನಾಡುತ್ತಾರೆ. ಅವರನ್ನು ಕನ್ನಡ ಮಾತನಾಡುವುಂತೆ ಹೇಳುವುದು ಅಸಂವೇದನಾಶೀಲವೆಂದು ತೋರುತ್ತದೆ" ಎಂದು ಉತ್ತರ ಕರ್ನಾಟಕದ ಅಧಿಕಾರಿಯೊಬ್ಬರು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ಥಳೀಯ ಭಾಷೆಯನ್ನು ಸಮರ್ಥಿಸಿಕೊಳ್ಳುತ್ತಾ, ಇಲ್ಲಿ ಅನೇಕ ಜನರು ತುಳು ಮಾತ್ರ ಮಾತನಾಡುತ್ತಾರೆ ಮತ್ತು ಸ್ವಾಭಾವಿಕವಾಗಿ ಅದನ್ನು ಬಳಸಲು ಬಯಸುತ್ತಾರೆ. ಬೆಳಗಾವಿ ಮತ್ತು ಬೀದರ್‌ನ ಕೆಲವು ಭಾಗಗಳಲ್ಲಿ ಮರಾಠಿ ಮತ್ತು ಉರ್ದು ಪ್ರಾಮುಖ್ಯತೆಯನ್ನು ಪಡೆದಂತೆ, ತುಳು ಇಲ್ಲಿಯೂ ಇದೇ ರೀತಿಯ ಮಾನ್ಯತೆಗೆ ಅರ್ಹವಾಗಿದೆ" ಎಂದು ಅವರು ಹೇಳಿದರು. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸಾಮಾನ್ಯವಾಗಿ ಮಾಡುವಂತೆ, ಅಧಿಕಾರಿಗಳು ಸ್ಥಳೀಯ ಭಾಷೆಯನ್ನು ಕಲಿಯಲು ಪ್ರಯತ್ನಿಸಬೇಕು ಎಂದು ವಾದಿಸಿ, ಜಿಲ್ಲಾ ಪಂಚಾಯತ್ ಟಿಪ್ಪಣಿಯನ್ನು ಹಿಂತೆಗೆದುಕೊಳ್ಳಬೇಕೆಂದು ಕಾಪಿಕಾಡ್ ಒತ್ತಾಯಿಸಿದರು.
Advertisement