ರೈತರ ಹಿತ ಕಾಪಾಡಿ ಎತ್ತಿನಹೊಳೆ ನೀರು ಒಯ್ಯುತ್ತೇವೆ: ಬೈರಗೊಂಡಲು ಜಲಾಶಯದಿಂದ ಮುಳುಗಡೆಗೊಳ್ಳುವ ರೈತರಿಗೆ ಡಿಸಿಎಂ ಭರವಸೆ

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಭೈರಗೊಂಡಲು ಜಲಾಶಯ ಮಾಡಿದರೆ 5 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು.
DK Shivakumar
ಡಿ.ಕೆ. ಶಿವಕುಮಾರ್
Updated on

ಕೊರಟಗೆರೆ: ನಿಮ್ಮನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ರೈತರ ಹಿತ ಕಾಪಾಡಿಕೊಂಡು, ನಿಮ್ಮ ಸಲಹೆಗಳನ್ನು ಸ್ವೀಕರಿಸಿ, ನಿಮಗೆ ಹೆಚ್ಚು ತೊಂದರೆಯಾಗದಂತೆ ಎತ್ತಿನಹೊಳೆ ಯೋಜನೆ ನೀರನ್ನು ತೆಗೆದುಕೊಂಡು ಹೋಗುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಭರವಸೆ ನೀಡಿದರು.

ಎತ್ತಿನಹೊಳೆ ಯೋಜನೆ ಸಂಬಂಧ 5 ಟಿಎಂಸಿ ನೀರನ್ನು ಸಂಗ್ರಹಿಸಲು ಕೊರಟಗೆರೆ ತಾಲೂಕು ಪೂಚನಹಳ್ಳಿಯಲ್ಲಿ ಬಳಿ ಬೈರಗೊಂಡಲು ಜಲಾಶಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾಮಗಾರಿಗಳ ಸ್ಥಳವನ್ನು ಶನಿವಾರ ಪರಿಶೀಲಿಸಿದರು. ನಂತರ ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗುವ ಸ್ಥಳೀಯ ಗ್ರಾಮಸ್ಥರ ಜೊತೆ ಮಾತನಾಡಿ, ಅವರ ಸಲಹೆ ಸ್ವೀಕರಿಸಿದರು. ಇದೇ ವೇಳೆ ಅವರಿಗೆ ಅನ್ಯಾಯ ಆಗದಂತೆ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ಸ್ಥಳೀಯ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, "ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಭೈರಗೊಂಡಲು ಜಲಾಶಯ ಮಾಡಿದರೆ 5 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು. ಇದರಿಂದ 5 ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಲಿದೆ" ಎಂದರು.

"ಹಾಸನ ಮಾರ್ಗವಾಗಿ ಪೈಪ್ ಲೈನ್ ಕೆಲಸ ಪೂರ್ಣಗೊಂಡು ಇಲ್ಲಿಯವರೆಗೂ ಬಂದಿದೆ. ಮುಂದೆ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲೂ ಪೈಪ್ ಲೈನ್ ಕೆಲಸ ಆರಂಭಿಸಿದ್ದೇವೆ. ನಾನು ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವನಾದ ಬಳಿಕ ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ದೊಡ್ಡ ಬಳ್ಳಾಪುರದಲ್ಲಿ (ಎಕರೆಗೆ 32 ಲಕ್ಷ) ಒಂದು ಬೆಲೆ, ಕೊರಟಗೆರೆ ಭಾಗದಲ್ಲಿ (20 ಲಕ್ಷ) ಒಂದು ಬೆಲೆ ನೀಡಲಾಗುತ್ತಿದೆ. ಪರಿಹಾರ ಸಮಾನವಾಗಿ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಈ ವಿಚಾರ ಬಗೆಹರಿಸಲು ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಪರಮೇಶ್ವರ್ ಅವರಿಗೆ ನೀಡಿದೆವು" ಎಂದು ಹೇಳಿದರು.

DK Shivakumar
2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವುದು ಸರ್ಕಾರದ ಸಂಕಲ್ಪ: ಡಿಕೆ ಶಿವಕುಮಾರ್

ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ತೆಗೆದುಕೊಂಡು ಹೋಗಲೇ ಬೇಕು. ನಿಮಗೆ ಭೂಮಿ ಬಿಟ್ಟುಕೊಡಲು ಇಚ್ಛೆ ಇಲ್ಲ. ಆದರೂ ಯೋಜನೆ ಮಾಡಲೇ ಬೇಕು. ಇದಕ್ಕೆ ಪರಿಹಾರ ಏನು? ನಿಮಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ನಿಮ್ಮ ಜತೆ ಚರ್ಚಿಸಲು ಬಂದಿದ್ದೇನೆ. ನಿಮಗೆ ಸಹಾಯ ಮಾಡಲು ಬಂದಿದ್ದೇನೆ ಹೊರತು, ನಿಮಗೆ ತೊಂದರೆ ಮಾಡಲು ಬಂದಿಲ್ಲ. ಈ ಯೋಜನೆ ಜಾರಿಗೆ ನೀವೇ ಪರಿಹಾರ ಹೇಳಿ" ಎಂದರು.

"ಈ ಯೋಜನೆಗಾಗಿ 17 ಸಾವಿರ ಕೋಟಿ ಬಂಡವಾಳ ಹಾಕಿದ್ದೇವೆ. ಬಹುತೇಕ ಕಡೆಗಳಲ್ಲಿ ಕಾಮಗಾರಿ ಮುಗಿದಿವೆ. ಹೀಗಾಗಿ ಈ ಯೋಜನೆ ಜಾರಿ ಮಾಡಲೇಬೇಕು. ನೀವು ಬೈದರೂ ಸರಿ, ಸಲಹೆ ನೀಡಿದರೂ ಸರಿ. ನಿಮ್ಮ ಮಾತನ್ನು ಆಲಿಸಿ, ನಿಮ್ಮ ಸಲಹೆ ಸ್ವೀಕರಿಸಲು ಬಂದಿದ್ದೇನೆ. ನಾವು ಇಲ್ಲಿ ಯಾರಿಂದಲೂ ಜಮೀನನ್ನು ಪುಕ್ಕಟೆಯಾಗಿ ಕಿತ್ತುಕೊಳ್ಳಲು ಬಂದಿಲ್ಲ. ನಿಮ್ಮನ್ನು ಬಲವಂತವಾಗಿ ಒಕ್ಕಲು ಎಬ್ಬಿಸುವುದಿಲ್ಲ" ಎಂದು ಭರವಸೆ ನೀಡಿದರು.

"ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಸರ್ಕಾರ ಭೂಸ್ವಾಧೀನಪಡಿಸಿಕೊಳ್ಳುವ ರೈತರಿಗೆ ಮಾರುಕಟ್ಟೆ ಬೆಲೆಗಿಂತ 4 ಪಟ್ಟು, ಬೆಂಗಳೂರಿನಲ್ಲಿ 2 ಪಟ್ಟು ಪರಿಹಾರ ನೀಡಲು ಕಾನೂನು ತಂದಿದ್ದಾರೆ" ಎಂದರು.

DK Shivakumar
ಹೊಸ ತಂತ್ರಜ್ಞಾನದ ಮೂಲಕ ದುರ್ವಾಸನೆ ಮುಕ್ತ ಕಸ ವಿಲೇವಾರಿ ಕೇಂದ್ರ; ಗ್ರಾಮಗಳ ಪುನರ್ವಸತಿ ಬಗ್ಗೆ ಚಿಂತನೆ: ಡಿ.ಕೆ ಶಿವಕುಮಾರ್

"ಈ ಭಾಗದ ಜನ ಜಲಾಶಯವನ್ನು ಮುಂದೆ ಮಾಡಿ ಎಂದು ಪಟ್ಟು ಹಿಡಿದಿರುವುದಾಗಿ ನನಗೆ ಮಾಹಿತಿ ಬಂತು. ಹೀಗಾಗಿ ನಾನೇ ಬಂದು ಪರಿಸ್ಥಿತಿ ನೋಡಿ ಪರಿಶೀಲನೆ ಮಾಡಲು ಬಂದಿದ್ದೇನೆ. ನಿಮ್ಮ ಎಲ್ಲಾ ಅಭಿಪ್ರಾಯ, ಸಲಹೆ ಸ್ವೀಕರಿಸಿದ್ದೇನೆ" ಎಂದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, "ಈ ಭಾಗದಲ್ಲಿರುವ ರೈತರು ಬಡವರು. ಎಲ್ಲರೂ 1 ಅಥವಾ 2 ಎಕರೆ ಭೂಮಿ ಹೊಂದಿರುವ ರೈತರು. ಹೀಗಾಗಿ ಇಲ್ಲಿ ಜಲಾಶಯ ನಿರ್ಮಾಣ ಮಾಡಬೇಡಿ. ಇನ್ನು ಮುಂದೆ ಕಣಿವೆ ಪ್ರದೇಶದಲ್ಲಿ ಎರಡು ಅಣೆಕಟ್ಟು ನಿರ್ಮಿಸಲು ಅವಕಾಶವಿದೆ. ಈ ಹಿಂದೆ ದೇವದುರ್ಗದಲ್ಲಿ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಲಾಗಿತ್ತು. ಜಲಾಶಯವನ್ನು ಬೇರೆಡೆ ನಿರ್ಮಿಸಿ" ಎಂದು ಮನವಿ ಸಲ್ಲಿಸಿದರು.

"ನೀವು ಈ ಜಲಾಶಯಕ್ಕೆ ಸೂಚಿಸಿರುವ ಪರ್ಯಾಯ ಜಾಗವನ್ನು ಪರಿಶೀಲನೆ ಮಾಡುತ್ತೇನೆ. ನಿಮ್ಮ ಸಲಹೆಗಳನ್ನು ಪರಿಶೀಲನೆ ಮಾಡುತ್ತೇನೆ. ನಂತರ ಸಚಿವ ಸಂಪುಟ ಸಭೆಯಲ್ಲಿ ನಾನು ವರದಿ ಪ್ರಸ್ತಾಪಿಸಿ ಅಂತಿಮ ತೀರ್ಮಾನ ಮಾಡಲಾಗುವುದು. ಆದಷ್ಟು ನಷ್ಟವನ್ನು ಕಡಿಮೆ ಮಾಡಿ ಈ ಯೋಜನೆ ಜಾರಿ ಮಾಡುತ್ತೇವೆ. ನಿಮ್ಮೆಲ್ಲರ ಹಿತವನ್ನು ಕಾಯುತ್ತೇವೆ" ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com