
ಕನಕಪುರ: ರೂರಲ್ ಎಜುಕೇಶನ್ ಸೊಸೈಟಿ ಉಳಿಸಿ, ಬೆಳೆಸುವುದು ನನ್ನ ಕೆಲಸ. ಜನಸಾಮಾನ್ಯರ ಮಕ್ಕಳಿಗಾಗಿ ಈ ಸಂಸ್ಥೆಯಿಂದ ಕೃಷಿ ಕಾಲೇಜು ನಿರ್ಮಾಣವಾಗಿದೆ. ಈ ಸಂಸ್ಥೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಮ್ಮೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕನಕಪುರದ ಹಾರೋಹಳ್ಳಿಯ ಮರಳವಾಡಿಯಲ್ಲಿ ಸ್ಥಾಪನೆಯಾಗಿರುವ ನೂತನ ಕರಿಯಪ್ಪ ಕೃಷಿ ಮಹಾವಿದ್ಯಾಲಯದ ಕಟ್ಟಡಕ್ಕೆ ಶಿವಕುಮಾರ್ ಭಾನುವಾರದಂದು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನನಗೂ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಂಠು ಅವರಿಗೆ ಸಂಸ್ಥೆಯ ಜಾಗ ಎಲ್ಲಿ ಒತ್ತುವರಿಯಾಗುತ್ತದೆಯೋ ಎನ್ನುವ ಆಂತಕವಿತ್ತು. ಈಗ ಸದರಿ ಜಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗುತ್ತಿರುವುದು ಸಮಾಧಾನ ತಂದಿದೆ" ಎಂದರು.
"ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಕಾರಣಕ್ಕೆ ಏನೆಲ್ಲಾ ಬದಲಾವಣೆಯಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಕೆಲವೊಬ್ಬರು ಇದನ್ನು ಟೀಕೆ ಮಾಡುತ್ತಿದ್ದಾರೆ. ಅವರುಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾವು ನಮಗೆ ಇರುವ ಹೆಸರನ್ನು ಉಳಿಸಿಕೊಂಡಿದ್ದೇವೆ. ಯಾರ ಹೆಸರನ್ನು ಕಿತ್ತುಕೊಂಡಿಲ್ಲ" ಎಂದರು.
"ನಾನು ಈ ಹಿಂದೆ ಬೆಂಗಳೂರು ಗ್ರಾಮಾಂತರದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಸುರೇಶ್ ಅವರು ಬೆಂಗಳೂರು ಹಾಲು ಒಕ್ಕೂಟದ ಸದಸ್ಯರಾಗಿದ್ದಾರೆ. ಸಂಸತ್ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಕರೆಯಲಾಗುತ್ತದೆ. ಎಲ್ಲಿಂದ ಎಲ್ಲಿಗೆ ಹೋದರು ಅಮೇರಿಕಾ ಎನ್ನುತ್ತಾರೆ. ಅದೇ ರೀತಿ ಇದೂ ಕೂಡ ಬೆಂಗಳೂರು" ಎಂದು ಹೇಳಿದರು.
"ಈಗಾಗಲೇ ರಾಮನಗರ ಕ್ಷೇತ್ರಕ್ಕೆ 1 ಸಾವಿರ ಕೋಟಿಯಷ್ಟು ಅನುದಾನ ನೀಡಲಾಗಿದೆ. ಇದರ ಬಗ್ಗೆ ಅವರು ಪಟ್ಟಿ ಬಿಡುಗಡೆ ಮಾಡುತ್ತಾರೆ. ಚನ್ನಪಟ್ಟಣ ಉಪಚುನಾವಣೆ ವೇಳೆ 300 ಕೋಟಿಗೂ ಹೆಚ್ಚು ಹಣ ಕ್ಷೇತ್ರಕ್ಕೆ ನೀಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡಲಾಗಿದೆ" ಎಂದು ತಿಳಿಸಿದರು. "ಹಾರೋಹಳ್ಳಿ, ಕೋಡಹಳ್ಳಿ, ಸಾತನೂರು, ಕನಕಪುರ ಮುಖ್ಯರಸ್ತೆಗಳನ್ನು ಈ ಹಿಂದೆ ಅಗಲ ಮಾಡಲಾಯಿತು. ಆದ ಕಾರಣಕ್ಕೆ ಆಸ್ತಿ ಮೌಲ್ಯ ಹೆಚ್ಚಾಗಿದೆ. ರಸ್ತೆ ಅಗಲೀಕರಣ ಮಾಡಿದಷ್ಟು ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಪಿ.ಜಿ.ಆರ್.ಸಿಂಧ್ಯಾ ಅವರು ಮತಗಳು ಹೋಗುತ್ತವೆ ಎಂದು ರಸ್ತೆ ಅಗಲೀಕರಣ ಮಾಡಿರಲಿಲ್ಲ. 500 ಮತಗಳನ್ನು ನೋಡಲು ಹೋದರೆ 5 ಸಾವಿರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದರು.
ಉತ್ತಮವಾದ ಕೃಷಿ ಕಾಲೇಜು ನಿರ್ಮಾಣವಾಗುತ್ತಿದೆ. ತುಂಡು, ತುಂಡು ಕಾಮಗಾರಿ ಮಾಡಲು ಹೋಗಬೇಡಿ, ಈಗಲೇ 500 ವಿದ್ಯಾರ್ಥಿ ಸಾಮರ್ಥ್ಯದ ಹಾಸ್ಟಲ್, ಆಡಳಿತ ಭವನ ನಿರ್ಮಾಣವೂ ಆಗಲಿ ಎಂದು ಸಲಹೆ ನೀಡುತ್ತೇನೆ. ಸಾಲ ಸೌಲಭ್ಯ ದೊರೆಯಲಿಲ್ಲ ಎಂದರೆ ನಾನು ಸಾಲ ಕೊಡಿಸುತ್ತೇನೆ. ಈಗಾಗಲೇ ನಾನು ಕಟ್ಟಡ ವಾಸ್ತುಶಿಲ್ಪಿಗಳ ಬಳಿ ಕಟ್ಟಡ ವಿನ್ಯಾಸ ಹೇಗಿರಬೇಕು ಎಂದು ಚರ್ಚೆ ನಡೆಸಿ ಬದಲಾವಣೆ ಸೂಚಿಸಿದ್ದೇನೆ" ಎಂದರು.
ದುಡ್ಡು ಪಡೆದು ಮನೆ ನೀಡಿದ್ದೀರಿ ಎನ್ನುವ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ "ಇದೆಲ್ಲವೂ ಸುಳ್ಳು, ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ? ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ? ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಸೇರಿದಂತೆ ಎಲ್ಲೆಲ್ಲಿ ಮನೆ ನಿಡಬೇಕೋ ಆಯಾಯ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡುತ್ತಾರೆ. ನಾವು ತೀರ್ಮಾನ ಮಾಡಲು ಆಗುತ್ತದೆಯೇ" ಎಂದರು. ಬಿ.ಆರ್.ಪಾಟೀಲ್ ಅವರಿಗೆ ಪೂರ್ಣ ಮಾಹಿತಿ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ನಾನು ಅವರ ಬಳಿ ಮಾತನಾಡುತ್ತೇನೆ" ಎಂದು ಸ್ಪಷ್ಟವಾಗಿ ನುಡಿದರು.
Advertisement