
ಬೆಳಗಾವಿ: ವಸತಿ ಇಲಾಖೆಯಲ್ಲಿ ಹಣ ನೀಡಿದವರಿಗಷ್ಟೇ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂಬ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರ ಆಡಿಯೋ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದು ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಗೆ ಹೊಸ ಅಸ್ತ್ರವನ್ನು ನೀಡಿದಂತಾಗಿದ್ದು, ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಶಾಸಕ ರಾಜು ಕಾಗೆ, ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದಿದ್ದು, ರಾಜೀನಾಮೆಯ ಬೆದರಿಕೆ ಹಾಕಿದ್ದಾರೆ.
ಹೌದು. ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ, ನಮ್ಮ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಟೀಕಿಸಿದರು. ಬಿ.ಆರ್.ಪಾಟೀಲ್ ಹೇಳಿದ್ದು ಸುಳ್ಳಲ್ಲ, ನಿಜಾನೆ ಇದೆ. ಅವರು ಹೇಳಿದ್ದ ಅಪ್ಪನ ಹಾಗಾಗಿದೆ ನನ್ನ ಪರಿಸ್ಥಿತಿ ಎಂದರು.
ರಾಜೀನಾಮೆ ಕೊಟ್ಟರೂ ಅಶ್ಚರ್ಯ ಇಲ್ಲ: 25 ಕೋಟಿ ಅನುದಾನ ನೀಡಿ 2 ವರ್ಷ ಕಳೆದರೂ ವರ್ಕ್ ಆರ್ಡರ್ ಇಲ್ಲ. ಎರಡು ವರ್ಷ ಕಳೆದರೂ ವರ್ಕ್ ಆರ್ಡರ್ ನೀಡುತ್ತಿಲ್ಲ ಅಂದ್ರೆ ಏನರ್ಥ? ಇದರಿಂದ ನನ್ನ ಮನಸ್ಸಿಗೆ ಸಾಕಷ್ಟು ನೋವಾಗಿದೆ. ನಾನು ಸಹ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಎರಡು ದಿನದಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಕೊಟ್ಟರು ಆಶ್ಚರ್ಯವಿಲ್ಲ ಎಂದರು.
ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎನ್ನುವುದು ಅಸ್ಪಷ್ಟವಾಗಿದೆ.
ಶಾಸಕ ರಾಜು ಕಾಗೆ ಅಸಮಾಧಾನ ವಿಚಾರವಾಗಿ ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರತಿಕ್ರಿಯಿಸಿದ್ದು, ರಾಜೀನಾಮೆ ಕೊಡಬೇಕು ಅಂತಾ ಹೇಳಿದ್ದಾರೆ. ನೀವು ರಾಜೀನಾಮೆ ಕೊಡುವುದರಿಂದ ಈ ಸಮಸ್ಯೆ ಸರಿಯಾಗಲ್ಲ. ನಿಮ್ಮ ಮುಖ್ಯಮಂತ್ರಿ ಅವರಿಂದ ರಾಜೀನಾಮೆ ಕೊಡಿಸಿ. ಜನರ ಬಳಿ ಹೋಗೋಣ ಏನು ತೀರ್ಮಾನ ಆಗುತ್ತೆ ನೋಡೋಣ. ಬಿಜೆಪಿಗೆ ಯಾರು ಬಂದರೂ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ. ರಾಜು ಕಾಗೆ 2019ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮೂಲಕ ಕಾಗವಾಡ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ.
Advertisement