
ಬೆಂಗಳೂರು: ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ದೂರವಾಣಿ ಮೂಲಕ ನಾನು ಹೇಳಿದ್ದೆಲ್ಲವೂ ಸತ್ಯ. ಆಡಿಯೋದಲ್ಲಿರುವ ಧ್ವನಿ ನನ್ನದೇ, ನನ್ನ ಆರೋಪಕ್ಕೆ ನಾನು ಬದ್ಧನಾಗಿದ್ದೇನೆಂದು ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಪುನರುಚ್ಚರಿಸಿದ್ದಾರೆ.
'ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್' ಜೊತೆಗೆ ಮಾತನಾಡಿ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಆರೋಪಕ್ಕೆ ನಾನು ಬದ್ಧನಾಗಿದ್ದೇನೆಂದು ಹೇಳಿದ್ದಾರೆ.
ಆರೋಪದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ವಿವರಣೆ ಕೇಳಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲ ಎಂದು ತಿಳಿಸಿದರು.
ಆರೋಪ ಕುರಿತು ವಿರಣೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಹೈಕಮಾಂಡ್ ಸೂಚನೆ ನೀಡಿರುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಆಡಿಯೋದಲ್ಲಿ ಹೇಳಿರುವುದನ್ನೆಲ್ಲ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಕ್ರಮ ತೆಗೆದು ಕೊಳ್ಳುವ ವಿಶ್ವಾಸವಿದೆ ಎಂದರು.
ಈ ನಡುವೆ ಬಿಆರ್.ಪಾಟೀಲ್ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಬಿ.ಆರ್.ಪಾಟೀಲ್ ಖುದ್ದು ಕಡು ಭ್ರಷ್ಟರಿದ್ದು, ವಸತಿ ಹಗರಣದ ಮೂಲ ರೂವಾರಿ. ಅದನ್ನು ಮುಚ್ಚಿಕೊಳ್ಳಲು ಸರ್ಕಾರದ ಹಾಗೂ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆಂದು ಆರೋಪಿ ಮಾಡಿದ್ದಾರೆ.
ಆಳಂದ ತಾಲೂಕಿನಲ್ಲಿ ಹಣ ಪಡೆದುಕೊಂಡು ನಾನಾ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಹಾಗೂ ಅನರ್ಹರಿಗೆ ಮನೆಗಳನ್ನು ನೀಡುತ್ತಿರುವುದು ಸತ್ಯವಾಗಿದ್ದು, ಈ ಹಗರಣದ ಹಿಂದೆ ಶಾಸಕ ಹಾಗೂ ಶಾಸಕರ ಪುತ್ರ ಅವರ ಕೈವಾಡವಿದೆ. ಈ ಹಗರಣದ ಕುರಿತು ಕೂಡಲೇ ಸರ್ಕಾರ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ನ್ಯಾಯಮೂರ್ತಿ ಒಬ್ಬರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಸಂಪೂರ್ಣವಾಗಿ ವಸತಿ ಹಗರಣದ ತನಿಖೆಯನ್ನು ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಹಣ ಪಡೆದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು,
ಹಣ ಪಡೆದುಕೊಂಡು ಮನೆಗಳನ್ನು ನೀಡಲಾಗುತ್ತಿದೆ ಎಂದು ಈ ಹಿಂದೆಯೇ ಕೆಲವು ಅಧಿಕಾರಿಗಳು ಹಾಗೂ ಇತರೆ ಮುಖಂಡರು ಜಿಲ್ಲಾ ಪಂಚಾಯತಿಯ ಸಿಇಓ ಅವರಿಗೆ ದೂರು ನೀಡಿದ್ದಾರೆ. ಆದರೆ, ಆ ದೂರನ್ನಾಧರಿಸಿ ಕ್ರಮ ಕೈಗೊಳ್ಳದೆ ಇರುವುದು ದುಷ್ಟಕರ. ಆದರೆ, ಹಣವನ್ನು ಪಡೆದು ಮನೆಗಳನ್ನು ಹಂಚಿಕೆ ಮಾಡಲು ಶಿಫಾರಸ್ಸು ಮಾಡುವುದು ಹಾಗೂ ಪಂಚಾಯತಿ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು ಶಾಸಕ ಬಿ.ಆರ್. ಪಾಟೀಲ್ ಹಾಗೂ ಅವರ ಪುತ್ರ ಮತ್ತು ಇತರೆ ಅವರ ಮುಖಂಡರುಗಳಾಗಿದ್ದಾರೆ.
ಇದು ಎಲ್ಲವೂ ತಾಲೂಕಿನಲ್ಲಿ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಎಲ್ಲಿ ವಸತಿ ಹಗರಣ ಬಹಿರಂಗವಾಗಿ ಹೆಸರುಗಳು ಬಯಲಾಗುತ್ತವೆ ಎನ್ನುವ ಕಾರಣಕ್ಕಾಗಿ ಈಗ ನೇರವಾಗಿ ಅಧಿಕಾರಿಗಳ ತಲೆಗೆ ಕಟ್ಟುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಸಂಪುಟ ಪುನಾರಚನೆ ವೇಳೆ ಸಚಿವರಾಗಲು ಬಿ.ಆರ್. ಪಾಟೀಲ್ ಕಾಂಗ್ರೆಸ್ ಹೈಕಮಾಂಡ್ ಅನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಬಿ.ಆರ್. ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರರಾಗಿದ್ದಾಗ, ಅವರು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದರು. ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಬಿ.ಆರ್. ಪಾಟೀಲ್ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು ಎಂದಿದ್ದಾರೆ.
Advertisement