
ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಗೆ ತೆರಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಭೇಟಿಯಾದರು.
ಮುಖ್ಯಮಂತ್ರಿ ಕಚೇರಿ ಪ್ರಕಾರ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಬಾಲಿವುಡ್‌ನ ಸಂವೇದನಾಶೀಲ ನಟ-ನಿರ್ದೇಶಕ ಅಮೀರ್ ಖಾನ್ ಎದುರಾದರು. ಈ ವೇಳೆ ಉಭಯ ಕುಶಲೋಪರಿ ವಿಚಾರಿಸಿ, ಅವರ ಮುಂದಿನ ಚಿತ್ರಗಳಿಗೆ ಶುಭ ಕೋರಿದರು' ಎಂದು ಎಕ್ಸ್‌ನಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ಅಮೀರ್ ಖಾನ್ ಅವರನ್ನು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಕೈ ಬೀಸಿದರು. ಆಗ ಅಮೀರ್ ಖಾನ್ ಅವರು ಕೈಜೋಡಿಸಿ ಮುಖ್ಯಮಂತ್ರಿಗೆ ಶುಭಾಶಯ ಕೋರಿದರು. ನಂತರ ಇಬ್ಬರೂ ಕೈಕುಲುಕಿ ಉಭಯ ಕುಶಲೋಪರಿ ವಿಚಾರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಮಿರ್ ಖಾನ್ ಪರಸ್ಪರ ಶುಭಾಶಯ ಕೋರುತ್ತಿರುವ ಫೋಟೊಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ರಾತ್ರಿ ದೆಹಲಿಗೆ ತಲುಪಿದ್ದಾರೆ. ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ಕೋರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ದೆಹಲಿದೆ ತೆರಳಿದ್ದರು. ಇಂದು (ಮಂಗಳವಾರ) ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಬಾಲಿವುಡ್ ನಟ ಮುಖಾಮುಖಿಯಾದರು.
ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂಗೀಕರಿಸಿದ ಮಸೂದೆಗೆಳು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಾಯುತ್ತಿವೆ. ಅವುಗಳೆಂದರೆ:
* ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ, 2015
* ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ, 2024
* ನೋಟರಿಗಳು (ಕರ್ನಾಟಕ ತಿದ್ದುಪಡಿ) ಮಸೂದೆ, 2025
* ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025
* ಸರ್ಕಾರದ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಒದಗಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ, 2025
* ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ (ತಿದ್ದುಪಡಿ) ಕಾಯ್ದೆ, 2024
16ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ ಹಣ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ಈ ವಿಷಯದ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.
Advertisement