
ಬೆಂಗಳೂರು: ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತೀವ್ರ ಮುಜುಗರಕ್ಕೊಳಗಾಗುವಂತೆ ಮಾಡಿರುವ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರಿಗೆ ಜೂನ್.25ರಂದು ಭೇಟಿಯಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಬಿ.ಆರ್. ಪಾಟೀಲ್ ಅವರಿಗೆ ದೂರವಾಣಿ ಕರೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೂ. 25ರಂದು ಬೆಂಗಳೂರಿಗೆ ಬಂದು ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆಂದೂ ಮೂಲಗಳು ತಿಳಿಸಿವೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ರಾಯಚೂರಿನಲ್ಲಿ ಕಾರ್ಯಕ್ರಮ ಇರುವ ಕಾರಣ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಹಾಜರಿರಲಿದ್ದಾರೆ. ಆರೋಪ ಸಂಬಂಧ ಚರ್ಚೆ ನಡೆಸೋಣ, ಈ ವೇಳೆ ಭೇಟಿಯಾಗುವಂತೆ ಸೂಚನೆ ನೀಡಿದ್ದೆ. ಆದರೆ, ಕಾರ್ಯಕ್ರಮಕ್ಕೆ ತಮಗೆ ಆಹ್ವಾನವಿರದ ಕಾರಣ ರಾಯಚೂರಿಗೆ ಬರಲು ಸಾಧ್ಯವಿಲ್ಲ ಎಂದು ಪಾಟೀಲ್ ಹೇಳಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸುತ್ತೇನೆಂದು ಹೇಳಿದ್ದರು.
ಇದೇ ವೇಳೆ ಶಾಸಕ ರಾಜು ಕಾಗೆ ಆರೋಪ ಕುರಿತು ಪ್ರತಿಕ್ರಿಯಿಸಿ, ರಾಜು ಕಾಗೆ ಅವರೊಂದಿಗೆ ಮಾತುಕತೆ ನಡೆಸಲಾವುದು ಎಂದು ತಿಳಿಸಿದ್ದಾರೆ.
ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಪಕ್ಷದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಒತ್ತಾಯಿಸಿರುವ ಕುರಿತು ಮಾತನಾಡಿ, ಯಾವ ಸಂದರ್ಭಗಳಲ್ಲಿ ಈ ಬೇಡಿಕೆ ಇಡಲಾಗಿದೆ ಎಂದು ತನಗೆ ತಿಳಿದಿಲ್ಲ ಎಂದರು.
ಗಣಿಗಾರಿಕೆ ಹಗರಣದ ಕುರಿತು ಸಚಿವ ಎಚ್.ಕೆ. ಪಾಟೀಲ್ ಅವರ ಪತ್ರದ ಕುರಿತು ಮಾತನಾಡಿ, ಈ ಹಗರಣ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿಲ್ಲ ಎಂದು ಹೇಳಿದರು.
Advertisement