
ಗದಗ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾವಣಿ ಕುಸಿದು ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಗದಗ ಜಿಲ್ಲೆ ಗಜೇಂದ್ರ ಗಡ ತಾಲ್ಲೂಕಿನ ಚಿಲಝರಿ ಗ್ರಾಮದಲ್ಲಿ ನಡೆದಿದೆ.
6ನೇ ತರಗತಿ ಕೊಠಡಿ ಮೇಲ್ಛಾವಣಿ ಕಾಂಕ್ರೀಟ್ ಪದರ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಎಮ್.ಡಿ ಒಂಟಿ ಎಂಬ ಶಿಕ್ಷಕರ ತಲೆಗೆ ಗಂಭೀರ ಗಾಯಗಳಾಗಿವೆ. ಮಕ್ಕಳ ತಲೆ, ಕೈ, ಕಾಲು, ಮುಖಕ್ಕೆ ಗಾಯಗಳಾಗಿವೆ.
ಗಾಯಾಳು ಮಕ್ಕಳು ಹಾಗೂ ಶಿಕ್ಷಕರನ್ನು ಕೂಡಲೇ ಗಜೇಂದ್ರಗಡ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಛಾವಣಿ ಕುಸಿತದಿಂದ ಹಲವು ಡೆಸ್ಕ್‌ಗಳು, ಬೆಂಚುಗಳು ಸೇರಿದಂತೆ ಪೀಠೋಪಕರಣಗಳಿಗೂ ಹಾನಿಯಾಗಿದೆ. ಘಟನೆ ನಡೆದ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ರಕ್ಷಣೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಗದಗ ಎಸ್ ಪಿ, ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕನಿಗೆ ಗಾಯಗಳಾಗಿವೆ. ಬಿಇಒ ಅಥವಾ ಬೇರೆ ಯಾರಾದರೂ ದೂರು ದಾಖಲಿಸಿದರೆ, ಕೇಸ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗುದು ಎಂದು ತಿಳಿಸಿದರು.
Advertisement