ಸರ್ಕಾರಿ ಶಾಲೆ ಉಳಿವಿಗೆ ಯತ್ನ: ಒಂದನೇ ತರಗತಿಗೆ ದಾಖಲಾದರೆ 1 ಸಾವಿರ ರೂ ಠೇವಣಿ: ಮಾದರಿಯಾಯ್ತು ಮುಖ್ಯೋಪಾಧ್ಯಾಯರ ನಡೆ

ಗಡಿ ಜಿಲ್ಲೆ ಬೆಳಗಾವಿಯ ಅಥಣಿ ತಾಲ್ಲೂಕಿನ ಅಡಹಳ್ಳಟ್ಟಿಯ ಹಿಪ್ಪರಗಿ ತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೂ ಮಕ್ಕಳು ಓದುತ್ತಿದ್ದಾರೆ.
ಸರ್ಕಾರಿ ಶಾಲೆ
ಸರ್ಕಾರಿ ಶಾಲೆ
Updated on

ಅಥಣಿ (ಬೆಳಗಾವಿ ಜಿಲ್ಲೆ): ಈಗ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದಕ್ಕಿಂತ ಖಾಸಗಿ ಶಾಲೆಯತ್ತ ಪಾಲಕರು ಮುಖ ಮಾಡಿದ್ದಾರೆ. ಈ ಮಧ್ಯೆ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಇಲ್ಲೊಬ್ಬ ಮುಖ್ಯೋಪಾಧ್ಯಾಯರು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಗಡಿ ಜಿಲ್ಲೆ ಬೆಳಗಾವಿಯ ಅಥಣಿ ತಾಲ್ಲೂಕಿನ ಅಡಹಳ್ಳಟ್ಟಿಯ ಹಿಪ್ಪರಗಿ ತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೂ ಮಕ್ಕಳು ಓದುತ್ತಿದ್ದಾರೆ.

ಈ ಶಾಲೆಯ ಮುಖ್ಯಶಿಕ್ಷಕರಾಗಿರುವ ಸಿದ್ದಮಲ್ಲ ಖೋತ ಅವರು ತಮ್ಮ ಶಾಲೆಗೆ ಮಕ್ಕಳು ದಾಖಲಾಗುವಂತೆ ಆಕರ್ಷಿಸಲು ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ಒಂದು ಸಾವಿರ ರೂಪಾಯಿ ಭದ್ರತಾ ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡುತ್ತಿದ್ದಾರೆ. ಈ ಶಾಲೆಗೆ ಈ ಶೈಕ್ಷಣಿಕ ವರ್ಷದಲ್ಲಿ 9 ಮಕ್ಕಳು ಇಲ್ಲಿಯವರೆಗೂ ದಾಖಲಾಗಿದ್ದಾರೆ, ಈ ಮಕ್ಕಳ ಹೆಸರಿನಲ್ಲಿ 1000 ರೂಪಾಯಿ ಬ್ಯಾಂಕಿನಲ್ಲಿ ಹಣ ಜಮಾ ಮಾಡಿದ್ದಾರೆ,

ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿರುವ ಈ ಶಾಲೆ 2005ರಲ್ಲಿ ಸ್ಥಾಪನೆಯಾಗಿದ್ದು, 2015ರವರೆಗೂ ಇಲ್ಲಿ 1ರಿಂದ 7ನೇ ತರಗತಿಯಲ್ಲಿ 60ರಿಂದ 70 ವಿದ್ಯಾರ್ಥಿಗಳು ಓದುತ್ತಿದ್ದರು. ಶಿಕ್ಷಕರು ಮತ್ತು ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳ ದಾಖಲಾತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ 18 ಮಕ್ಕಳಷ್ಟೇ ಇದ್ದರು.

2023ರ ಜುಲೈನಲ್ಲಿ ಈ ಶಾಲೆಗೆ ನಿಯೋಜನೆಗೊಂಡ ಸಿದ್ದಮಲ್ಲ ಖೋತ ಅವರು, ಮಕ್ಕಳನ್ನು ಸೆಳೆಯಲು ನಾನಾ ಶೈಕ್ಷಣಿಕ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಊರಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ತಿಂಗಳಿಗೊಮ್ಮೆ ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಿ, ತಾವೇ ಸ್ವತಃ ಬಹುಮಾನ ನೀಡುತ್ತಿದ್ದಾರೆ.

ಸರ್ಕಾರಿ ಶಾಲೆ
Vijayapura ಜನರಿಗೆ ಉಚಿತ ವೈದ್ಯಕೀಯ ಸೇವೆ: ವೈದ್ಯ ವೃತ್ತಿ ಬಿಡದೆ ಜವಾಬ್ದಾರಿ ಮೆರೆಯುತ್ತಿರುವ ENT ತಜ್ಞ ಶಾಸಕ!

ಗ್ರಾಮದ ಯುವಕ–ಯುವತಿಯರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಕಾರ್ಯಾಗಾರ ಸಂಘಟಿಸಿದ್ದಾರೆ. ಅಲ್ಲದೆ, ಈ ಬೇಸಿಗೆಯಲ್ಲೂ ತಮ್ಮ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿ ನಡೆಸಿದ್ದಾರೆ. ದಾನಿಗಳ ನೆರವಿನೊಂದಿಗೆ ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರೊಂದಿಗೆ ಒಂದನೇ ತರಗತಿಯಿಂದಲೇ ದಾಖಲಾತಿ ಹೆಚ್ಚಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ.

‘ಕಳೆದ ವರ್ಷ ನಮ್ಮಲ್ಲಿ 1ನೇ ತರಗತಿಗೆ ಇಬ್ಬರು ಮಕ್ಕಳಿದ್ದರು. ಈ ಬಾರಿ ಶಾಲೆ ಆರಂಭೋತ್ಸವ ದಿನವೇ 9 ಮಕ್ಕಳು ಪ್ರವೇಶ ಪಡೆದಿದ್ದಾರೆ. ಠೇವಣಿ ಇರಿಸುವುದು ಸಣ್ಣ ಪ್ರಯತ್ನವಷ್ಟೇ. ನಮಗೆ ಲಭ್ಯವಿರುವ ಸೌಕರ್ಯ ಬಳಸಿಕೊಂಡು ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಶೈಕ್ಷಣಿಕ ಕಾರ್ಯಕ್ರಮ ಮೆಚ್ಚಿ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದಾರೆಂದು ಮುಖ್ಯ ಶಿಕ್ಷಕ ಸಿದ್ದಮಲ್ಲ ಅವರು ಹೇಳಿದ್ದಾರೆ.

ಶಾಲೆಯಲ್ಲಿನ ಶಿಕ್ಷಕರೆಲ್ಲ ಸೇರಿಕೊಂಡು ದಾಖಲಾತಿ ಅಭಿಯಾನ ನಡೆಸುತ್ತಿದ್ದೇವೆ. ವಿವಿಧ ತರಗತಿಗಳ ಪ್ರವೇಶಕ್ಕೂ ಹಲವರು ಸಂಪರ್ಕಿಸಿದ್ದು, ಈ ವಾರ ಮಕ್ಕಳ ದಾಖಲಾತಿ 40 ದಾಟಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ನಮ್ಮ ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಶಾಲೆಯಲ್ಲಿ ಮೂಲಸೌಕರ್ಯ ಸಮಸ್ಯೆಗಳಿವೆ. ಶಾಲೆಗೆ ಆವರಣ ಗೋಡೆ, ಸುಸಜ್ಜಿತ ಶೌಚಗೃಹ ನಿರ್ಮಿಸಬೇಕು. ಕುಡಿಯುವ ನೀರಿನ ಫಿಲ್ಟರ್‌, ಆಧುನಿಕ ಕಲಿಕೋಪಕರಣಗಳ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ನಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ನಾವು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ನಂಬುವಂತೆ ಪೋಷಕರನ್ನು ಪ್ರೋತ್ಸಾಹಿಸಲು ಭದ್ರತಾ ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಿದ್ದಮಲ್ಲ ಅವರ ಈ ಸಮರ್ಪಣಾ ಭಾವನೆ ಇತರರಿಗೆ ಮಾದರಿಯಾಗಿದೆ. ಸೀಮಿತ ಸಂಪನ್ಮೂಲಗಳಿದ್ದರೂ, ಸೃಜನಶೀಲ ಉಪಕ್ರಮಗಳು ಮತ್ತು ಸಮುದಾಯದ ಒಳಗೊಳ್ಳುವಿಕೆಯೊಂದಿಗೆ ಕೂಡ ಸರ್ಕಾರಿ ಶಾಲೆಗಳಿಗೆ ಹೊಸ ಜೀವ ತುಂಬಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com