
ಕುಡ್ಲಿಗಿ (ವಿಜಯನಗರ): ಇಲ್ಲೊಬ್ಬ ಶಾಸಕರು ವೈದ್ಯರೂ ಆಗಿದ್ದು, ಇದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಜನರಿಗೆ ವರದಾನವಾಗಿ ಪರಿಣಮಿಸಿದೆ.
ಕಿವಿ, ಮೂಗು ಮತ್ತು ಗಂಟಲು (ಇಎನ್‌ಟಿ) ತಜ್ಞರಾಗಿರುವ ಕ್ಷೇತ್ರದ ಶಾಸಕ ಡಾ. ಎನ್‌ಟಿ ಶ್ರೀನಿವಾಸ್ ಅವರು, ತಮ್ಮ ಸಾರ್ವಜನಿಕ ಸಭೆಗಳಲ್ಲಿ ಇಲ್ಲಿಯವರೆಗೆ 6,000 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದಾರೆ.
ಈ ಚಿಕಿತ್ಸೆ ಉಚಿತವಾಗಿದ್ದು, ಶಾಸಕರ ಈ ಸಾರ್ವಜನಿಕ ಸಭೆ ಸಾಕಷ್ಟ ಜನಪ್ರಿಯತೆ ಪಡೆದುಕೊಂಡಿದೆ, ಸಭೆಗೂ ಮುನ್ನ ಘೋಷಣೆಗಳನ್ನು ಮಾಡಲಾಗುತ್ತದೆ. ಚಿಕಿತ್ಸೆ ಅಗತ್ಯವಿರುವವರೂ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗುತ್ತದೆ.
ಕೂಡ್ಲಿಗಿ ಶಾಸಕ ಶ್ರೀನಿವಾಸ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ತಂದೆ ನಿಧನದ ನಂತರ ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಶ್ರೀನಿವಾಸ್ ಅವರು ನವದೆಹಲಿಯ ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಕೆಲಸ ಮಾಡಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಶ್ರೀನಿವಾಸ್ ಅವರು, ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ಅವರನ್ನು ಏಮ್ಸ್‌ಗೆ ಶಿಫಾರಸು ಮಾಡುತ್ತಾರೆ, ಶಾಸಕರಿಗೆ ಏಮ್ಸ್ ನಲ್ಲಿ ಬಹಳಷ್ಟು ವೈದ್ಯರು ಮತ್ತು ಸಿಬ್ಬಂದಿಗಳು ತಿಳಿದಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಇದು ಸಹಾಯಕವಾಗುತ್ತಿದೆ ಎನ್ನಲಾಗಿದೆ.
ಸಾರ್ವಜನಿಕರ ಪ್ರತಿನಿಧಿಯಾಗಿ ಮತ್ತು ವೈದ್ಯನಾಗಿ ಸೇವೆ ಸಲ್ಲಿಸಲು ಇದು ನನಗೆ ಒಂದು ಉತ್ತಮ ಅವಕಾಶ. ನನ್ನ ಕ್ಷೇತ್ರ ಮತ್ತು ಕ್ಷೇತ್ರದ ಜನರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನನಗೆ ಅವಕಾಶ ಸಿಗುತ್ತಿದೆ. ಕಾರ್ಯಕ್ರಮಕ್ಕೂ ಮುನ್ನ ನನ್ನ ತಂಡ ಘೋಷಣೆಗಳನ್ನು ಮಾಡಲಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು ಬರುವಂತೆ ತಿಳಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ರೋಗಿಗಳ ಪರಿಶೀಲಿಸಿ, ಚಿಕಿತ್ಸೆಗೆ ಸೂಚಿಸಲಾಗುವುದು. ಸ್ಥಳದಲ್ಲೇ ಔಷಧಿಗಳನ್ನು ನೀಡುವ ಕೆಲಸಗಳನ್ನೂ ಮಾಡಲಾಗುತ್ತದೆ. ಅಗತ್ಯ ಇರುವವರಿಗೆ ತಜ್ಞ ವೈದ್ಯರಿಗೆ ಶಿಫಾರಸ್ಸುಗಳನ್ನು ಕೂಡ ಮಾಡಲಾಗುವುದು ಎಂದು ಶಾಸಕ ಹಾಗೂ ವೈದ್ಯ ಶ್ರೀನಿವಾಸ್ ಅವರು ಹೇಳಿದ್ದಾರೆ.
ಎಲ್ಲಾ ಏಮ್ಸ್ ಆಸ್ಪತ್ರೆಗಳಲ್ಲಿ ನನಗೆ ಬಹಳಷ್ಟು ಸಂಪರ್ಕಗಳಿವೆ. ನನ್ನ ಕ್ಷೇತ್ರದ 200 ಕ್ಕೂ ಹೆಚ್ಚು ಜನರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ, ನಿಯಮಿತವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುತ್ತೇನೆ. ರೋಗಿಗಳ ಸ್ಥಿತಿ ಮತ್ತು ಅಲ್ಲಿ ಲಭ್ಯವಿರುವ ಔಷಧಿಗಳನ್ನು ಪರಿಶೀಲಿಸುತ್ತೇನೆಂದು ತಿಳಿಸಿದ್ದಾರೆ.
ಕೂಡ್ಲಿಗಿ ನಿವಾಸಿ ಅಮರನಾಥ್ ಟಿ ಎಂಬುವವರು ಮಾತನಾಡಿ, ನಮ್ಮ ಶಾಸಕರು ವೈದ್ಯರಾಗಿರುವುದು ನಮಗೆ ನಿಜಕ್ಕೂ ವರವಾಗಿದೆ. ಅವರ ಸಾರ್ವಜನಿಕ ಸಭೆಗಳು ಅಥವಾ ಕಾರ್ಯಕ್ರಮಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ, ಔಷಧಿಗಳನ್ನು ನಮಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
Advertisement