News headlines 24-06-2025 | ವಸತಿ ಹಗರಣ ಸಾಬೀತಾದರೆ ರಾಜೀನಾಮೆ- ಜಮೀರ್; ನಮ್ಮ ಬಳಿ, ಸಿದ್ದರಾಮಣ್ಣನ ಬಳಿ ದುಡ್ಡಿಲ್ಲ- ಪರಮೇಶ್ವರ್; ಕಾಂಗ್ರೆಸ್ ಆಡಳಿತ ವೈಖರಿಗೆ ಮತ್ತೋರ್ವ ಶಾಸಕ ಗರಂ; Anantkumar Hegde, ಗನ್ ಮ್ಯಾನ್, ಚಾಲಕನ ವಿರುದ್ಧ FIR

News headlines 24-06-2025 | ವಸತಿ ಹಗರಣ ಸಾಬೀತಾದರೆ ರಾಜೀನಾಮೆ- ಜಮೀರ್; ನಮ್ಮ ಬಳಿ, ಸಿದ್ದರಾಮಣ್ಣನ ಬಳಿ ದುಡ್ಡಿಲ್ಲ- ಪರಮೇಶ್ವರ್; ಕಾಂಗ್ರೆಸ್ ಆಡಳಿತ ವೈಖರಿಗೆ ಮತ್ತೋರ್ವ ಶಾಸಕ ಗರಂ; Anantkumar Hegde, ಗನ್ ಮ್ಯಾನ್, ಚಾಲಕನ ವಿರುದ್ಧ FIR

1. ಸರ್ಕಾರದ ವಿರುದ್ಧ ಶಾಸಕ NY Gopalakrishna ಅಸಮಾಧಾನ!

ತಮ್ಮದೇ ಸರ್ಕಾರದ ಆಡಳಿತ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ್ದ ಬಿಆರ್ ಪಾಟೀಲ್, ಕಾಮಗಾರಿ ವಿಷಯದಲ್ಲಿ ಕಮಿಷನ್ ಆರೋಪ ಮಾಡಿದ್ದ ರಾಜು ಕಾಗೆ ಬೆನ್ನಲ್ಲೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಓರ್ವ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಒಂದು ಮೋರಿಯನ್ನೂ ನಿರ್ಮಿಸಲಾಗುತ್ತಿಲ್ಲ ಎಂದು ಬಹಿರಂಗವಾಗಿ ಎನ್ ವೈ ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ. ವಿಂಡ್‌ಮಿಲ್‌ ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಳಕಾಲ್ಮುರಿನಂತಹ ಗ್ರಾಮೀಣ ಭಾಗದಲ್ಲಿ ಕಂಪನಿ ಆರಂಭಿಸಿರುವ ಖಾಸಗಿಯವರ ಸಾಹಸವನ್ನು ಪ್ರಶಂಸೆ ಮಾಡುತ್ತಾ ಸರ್ಕಾರದಿಂದ ತಮಗೆ ಆಗುತ್ತಿರುವ ಅನುದಾನ ಕೊರತೆಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.

2. ವಸತಿ ಹಗರಣ ಸಾಬೀತಾದರೆ ರಾಜೀನಾಮೆ- ಜಮೀರ್

ರಾಜ್ಯ ರಾಜಕೀಯದಲ್ಲಿ ದೊಡ್ಡದಾಗಿ ಸದ್ದು ಮಾಡಿರುವ ವಸತಿ ಇಲಾಖೆಯ ವಿರುದ್ಧದ ಹಗರಣಗಳ ಕುರಿತು ಕಾಂಗ್ರೆಸ್ ಶಾಸಕ ಬಿ ಆರ್‌ ಪಾಟೀಲ್‌ ಆರೋಪಗಳಿಗೆ, ವಸತಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಡವರಿಂದ ಹಣ ಪಡೆದು ಮನೆ ನೀಡಿದರೆ ಹುಳ ಬಿದ್ದು ಸಾಯ್ತಾರೆ, ಬಡವರಿಗೆ ಕೊಡುವ ಮನೆಗೆ ಹಣ ಪಡೆದು ಬದುಕುವ ದರಿದ್ರ ನನಗೆ ಬಂದಿಲ್ಲ ಎಂದು ಹೇಳಿರುವ ಸಚಿವ ಜಮೀರ್ ಅಹಮದ್ ಖಾನ್ ಬಡವರಿಗೆ ಮನೆ ಹಂಚಿಕೆ ಮಾಡಲು ನಾನು ಹಣ ಪಡೆದಿರುವುದು ಸಾಬೀತು ಮಾಡಿದರೆ ಬೇರೆಯವರು ಕೇಳುವುದು ಬೇಡ ನಾನೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ.

3. ಸಿಎಂ ಸಿದ್ದರಾಮಯ್ಯ- ರಾಷ್ಟ್ರಪತಿ ಭೇಟಿ, ರಾಜ್ಯದ ಮಸೂದೆಗಳಿಗೆ ಅನುಮೋದನೆಗೆ ಮನವಿ

ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದು, ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರ ಅಂಗೀಕರಿಸಿರುವ ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ರಾಷ್ಟ್ರಪತಿಗಳ ಮುಂದೆ ಮಂಡಿಸಲಾದ ಪ್ರಮುಖ ಮಸೂದೆಗಳ ಪೈಕಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಮಸೂದೆ, 2015 ಸೇರಿದ್ದು, ಇದು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಆರ್‌ಟಿಇ ಚೌಕಟ್ಟನ್ನು ಮಾರ್ಪಡಿಸುವ ಉದ್ದೇಶ ಹೊಂದಿದೆ. ಈ ಮಸೂದೆಗಳು ರಾಜ್ಯದಲ್ಲಿ ಜಾರಿಗೆ ಬರುವ ಮೊದಲು ಕೇಂದ್ರ ಸರ್ಕಾರದ ಅನುಮೋದನೆಯನ್ನು ಕಡ್ಡಾಯಗೊಳಿಸುವ ನಿಬಂಧನೆಗಳ ಅಡಿಯಲ್ಲಿ ಬರುವುದರಿಂದ ರಾಷ್ಟ್ರಪತಿಗಳ ಒಪ್ಪಿಗೆ ಅಗತ್ಯವಿರುತ್ತದೆ. ಅನಂತರ, ಸಿಎಂ ಸಿದ್ದರಾಮಯ್ಯ ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, 15ನೇ ಹಣಕಾಸು ಆಯೋಗದ ಪಾಲುಗಳ ಅಡಿಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಷ್ಟಗಳ ವಿವರಿಸಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲು ಶೇ. 4.713 ರಿಂದ ಶೇ. 3.647 ಕ್ಕೆ ಇಳಿದಿದೆ - ಇದು ಶೇ. 23 ಕ್ಕಿಂತ ಹೆಚ್ಚು ಕಡಿತವಾಗಿದೆ. ಕರ್ನಾಟಕಕ್ಕೆ ವಿಶೇಷ ಅನುದಾನಗಳಲ್ಲಿ 11,495 ಕೋಟಿ ರೂ.ಗಳನ್ನು ನಿರಾಕರಿಸಲಾಯಿತು, ಇದರ ಪರಿಣಾಮವಾಗಿ ಆ ಅವಧಿಯಲ್ಲಿ ಒಟ್ಟು 80,000 ಕೋಟಿ ರೂ.ಗಳ ನಷ್ಟ ಉಂಟಾಯಿತು ಎಂದು ತಿಳಿಸಿದ್ದಾರೆ.

4. ನಮ್ಮ ಬಳಿ, ಸಿದ್ದರಾಮಣ್ಣನ ಬಳಿ ದುಡ್ಡಿಲ್ಲ- ಪರಮೇಶ್ವರ್

ಗೃಹ ಸಚಿವ ಡಾ. ಜಿ ಪರಮೇಶ್ವರ, ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳಿರುವ ಮಾತುಗಳು ವ್ಯಾಪಕವಾಗಿ ವೈರಲ್ ಆಗತೊಡಗಿವೆ. ಬಾಗಲಕೋಟೆಯಲ್ಲಿ ನಿನ್ನೆ ಮಾತನಾಡಿದ್ದ ಗೃಹ ಸಚಿವರು, ಬಾದಾಮಿ ಅಭಿವೃದ್ಧಿಗೆ ಒಂದು ಯೋಜನೆ ಸಿದ್ದ ಮಾಡಿ. ಅದು ಎಷ್ಟು ಮೊತ್ತದ್ದಾದರೂ ಪರವಾಗಿಲ್ಲ. ಅದು ಸಾವಿರ ಕೋಟಿ ಪ್ರಾಜೆಕ್ಟ್ ಆಗಿರಲಿ. ಪ್ರಸ್ತಾವನೆ ಸಿದ್ಧ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಿ. ಯಾಕೆಂದರೆ, ನಮ್ಮ ಬಳಿ ದುಡ್ಡಿಲ್ಲ. ಸಿದ್ದರಾಮಣ್ಣನ ಬಳಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಪರಮೇಶ್ವರ, ರಾಜ್ಯ ಸರ್ಕಾರದಲ್ಲಿ ಯಾವುದೇ ಹಣದ ಕೊರತೆಯಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.

5. ರಸ್ತೆ ಜಗಳ: anant kumar hegde, ಗನ್ ಮ್ಯಾನ್, ಚಾಲಕನ ವಿರುದ್ಧ FIR

ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ನಡೆದ ರಸ್ತೆ ಜಗಳ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಮಾಜಿ ಸಚಿವ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಅವರ ಗನ್‌ಮ್ಯಾನ್ ಮತ್ತು ಚಾಲಕನ ವಿರುದ್ಧ ದಾಬಸ್‌ಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೆಗಡೆ ಅವರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬರುತ್ತಿದ್ದಾಗ, ಎಸ್‌ಯುವಿ ಕಾರನ್ನು ಓವರ್ ಟೇಕ್ ಮಾಡಿ ನಿಲ್ಲಿಸಿ ಚಾಲಕನ ವಿರುದ್ಧ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೆಗಡೆ ಅವರ ಕಾರು ಚಾಲಕ, ಸೈಫ್ ಖಾನ್ ಅವರ ಕಾರಿಗೆ ಎರಡು ಮೂರು ಬಾರಿ ಹಾರ್ನ್ ಮಾಡಿದ್ದರೂ ಸೈಫ್ ಖಾನ್ ಅದನ್ನು ಗಮನಿಸದೆ ಚಾಲನೆಯನ್ನು ಮುಂದುವರೆಸಿದರು. ಇದು ಗಲಾಟೆಗೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com