
ಕಲಬುರಗಿ: ನಗರದ ಹೊರವಲಯದ ಪಟ್ನಾ ಗ್ರಾಮದ ಬಳಿ ಡಾಬದಲ್ಲಿ ಬೆಳ್ಳಂಬೆಳಗ್ಗೆ ಮೂವರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಮೃತರನ್ನು ಡಾಬಾದ ಮಾಲೀಕರು ಸಿದ್ಧಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಎಂದು ಗುರುತಿಸಲಾಗಿದೆ.
ಮಂಗಳವಾರ ತಡರಾತ್ರಿ ರಾತ್ರಿ 11.30 ರ ಸುಮಾರಿಗೆ ಡಾಬಾಗೆ ನುಗ್ಗಿದ ಸುಮಾರು 8-10 ದುಷ್ಕರ್ಮಿಗಳು ಮಾಲೀಕ ಮತ್ತು ನೌಕರರು ಕೆಲಸ ಮಾಡುತ್ತಿದ್ದಾಗ ಮೂವರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆಗಳು ನಡೆದಿವೆ ಎಂದು ಹೇಳಲಾಗಿದೆ. ಕಳೆದ ವರ್ಷ ನವೆಂಬರ್ 12 ರಂದು ಈ ಡಾಬಾ ಬಳಿ ಯುವಕ ಸೋಮು ರಾಥೋಡ್ ಹತ್ಯೆಯಾಗಿತ್ತು.
ಮೃತ ಸೋಮು ರಾಥೋಡ್ ಡಾಬಾ ಮಾಲೀಕರೊಂದಿಗೆ 2 ಬಿಯರ್ ಬಾಟಲಿಗಳಿಗೆ ಹಣ ಪಾವತಿ ಮಾಡುವ ಸಂಬಂಧ ಜಗಳವಾಡಿದ್ದ. ನಂತರ ಡಾಬಾದ ಮಾಲೀಕರು ಮತ್ತು ನೌಕರರ ಮೇಲೆ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದೆ.
ಇದಕ್ಕೆ ಪ್ರತೀಕಾರವಾಗಿ ಡಾಬಾ ಮಾಲೀಕ ಮತ್ತು ಅವನ ಸಹಚರರು ಸೋಮು ರಾಥೋಡ್ ಮೇಲೆ ಹಲ್ಲೆ ನಡೆಸಿ ಕೊಂದು ಶವವನ್ನು ನಗರದ ಹೊರವಲಯದಲ್ಲಿ ಎಸೆದಿದ್ದರು. ಸೋಮು ರಾಥೋಡ್ ಹತ್ಯೆಗೆ ಸಂಬಂಧಿಸಿದಂತೆ, ಡಾಬಾದ ಮಾಲೀಕ ದಿವಂಗತ ಸಿದ್ದಾರೂಢ, ಜಗದೀಶ್ ಮತ್ತು ಆ ಸಮಯದಲ್ಲಿದ್ದ ಇತರ ಕೆಲವರನ್ನು ಪೊಲೀಸರು ಬಂಧಿಸಿದರು.
ಇತ್ತೀಚೆಗೆ ಸಿದ್ದಾರೂಢ ಮತ್ತು ಜಗದೀಶ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಸಿದ್ದಾರೂಢ ಧಾಬಾದಲ್ಲಿ ತಮ್ಮ ಕೆಲಸವನ್ನು ಮತ್ತೆ ಪ್ರಾರಂಭಿಸಿದ್ದ ಎಂದು ಮೂಲಗಳು ತಿಳಿಸಿವೆ. ಸೋಮು ರಾಥೋಡ್ ಹತ್ಯೆಗೆ ಪ್ರತೀಕಾರವಾಗಿ, ಮಂಗಳವಾರ ತಡರಾತ್ರಿ ಸೋಮು ರಾಥೋಡ್ ಅವರ ಸಹಚರರು ಸಿದ್ದಾರೂಢ ಮತ್ತು ಇತರ ಇಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಲಬುರಗಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ.
Advertisement