
ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ನ ಉತ್ಪಾದನಾ ಪ್ರಕ್ರಿಯೆಯನ್ನು ವೀಕ್ಷಿಸಲು ಬೆಂಗಳೂರಿನಲ್ಲಿರುವ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಘಟಕಕ್ಕೆ ಭಾರತದ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್ ಭೇಟಿ ನೀಡಿದರು. ಲಂಡನ್‌ನಲ್ಲಿ ಅಂತಹ ಪಾರಂಪರಿಕ ಉತ್ಪನ್ನಗಳನ್ನು - ಮೀಸಲಾದ ಅಂಗಡಿ ಅಥವಾ ಔಟ್‌ಲೆಟ್ ಮೂಲಕ - ಪ್ರದರ್ಶಿಸುವುದರಿಂದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಕೆಎಸ್ ಡಿಎಲ್ ಪರಂಪರೆ, ಆರ್ಥಿಕ ಬೆಳವಣಿಗೆ, ಮಾರುಕಟ್ಟೆ ಉಪಸ್ಥಿತಿ ಮತ್ತು ಭವಿಷ್ಯದ ವಿಸ್ತರಣಾ ಯೋಜನೆಗಳ ಬಗ್ಗೆಯೂ ಸಣ್ಣ ಮತ್ತು ಮಧ್ಯಮ ಗಾತ್ರ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಲಿಂಡಿ ಅವರಿಗೆ ವಿವರಿಸಿದರು. ಪ್ರಸ್ತಾವಿತ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಬೆಂಬಲ ವ್ಯಕ್ತಪಡಿಸಿದ ಅವರು, ನಮ್ಮ ಗುರಿಗಳನ್ನು ರಾಜಿ ಮಾಡಿಕೊಳ್ಳದೆ ಪರಸ್ಪರ ಹಿತಾಸಕ್ತಿಗಳನ್ನು ಪೂರೈಸುವ ರೀತಿಯಲ್ಲಿ ನಾವು ಪರಿಣತಿಯನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.
ಎಫ್‌ಟಿಎ ಎರಡೂ ರಾಷ್ಟ್ರಗಳಿಗೆ ಮತ್ತು ನಿರ್ದಿಷ್ಟವಾಗಿ ಕರ್ನಾಟಕದಂತಹ ಕೈಗಾರಿಕಾ ರಾಜ್ಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಸಾಂಪ್ರದಾಯಿಕ ಭಾರತೀಯ ಬ್ರ್ಯಾಂಡ್‌ಗಳನ್ನು ಜಾಗತಿಕವಾಗಿ ಪ್ರಚಾರ ಮಾಡುವುದು ಸೇರಿದಂತೆ ವ್ಯಾಪಾರ ಮತ್ತು ಕೈಗಾರಿಕಾ ಸಹಕಾರಕ್ಕಾಗಿ ಇದು ಹೊಸ ಮಾರ್ಗಗಳನ್ನು ತೆರೆಯಬಹುದು ಎಂದು ಅವರು ಹೇಳಿದರು.
ಮೈಸೂರು ಸ್ಯಾಂಡಲ್ ಸೋಪ್‌ನಂತಹ ವಸ್ತುಗಳು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ವಿದೇಶದಲ್ಲಿ ಪ್ರತಿನಿಧಿಸಲು ಕಾರ್ಯನಿರ್ವಹಿಸಬಹುದು ಎಂದು ಲಿಂಡಿ ಹೇಳಿದರು. ಈ ಉತ್ಪನ್ನಗಳು ಕರ್ನಾಟಕದಿಂದ ಬರುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲು ಮತ್ತು ಪ್ರದರ್ಶಿಸಲು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು.
ಪ್ರಸ್ತುತ, ಕೆಎಸ್‌ಡಿಎಲ್ ತನ್ನ ಉತ್ಪನ್ನಗಳನ್ನು 23 ದೇಶಗಳಿಗೆ ರಫ್ತು ಮಾಡುತ್ತದೆ. ನಾವು ಈಗ ಮೈಸೂರು ಸ್ಯಾಂಡಲ್ ಸೋಪ್ ಮತ್ತು ನಮ್ಮ ಶವರ್ ಜೆಲ್‌ಗಳ ವ್ಯಾಪ್ತಿಯನ್ನು ಯುರೋಪಿಯನ್ ಮಾರುಕಟ್ಟೆಗಳಿಗೆ ವಿಸ್ತರಿಸಲು ಯೋಜಿಸಿದ್ದೇವೆ ಯುಕೆಯ ಸಹಕಾರವು ಸಹಾಯಕವಾಗಿರುತ್ತದೆ ಎಂದರು.
ವಿಜಯಪುರದಲ್ಲಿ ಕೆಎಸ್‌ಡಿಎಲ್‌ನ ಪ್ರಸ್ತಾವಿತ ಹೊಸ ಘಟಕದ ಕುರಿತು, ಮಹಾರಾಷ್ಟ್ರ ಮತ್ತು ತೆಲಂಗಾಣದಂತಹ ನೆರೆಯ ರಾಜ್ಯಗಳಿಗೆ ಕಂಪನಿಯು ಸರಬರಾಜು ಮಾಡುವುದರಿಂದ ಲಾಜಿಸ್ಟಿಕ್ ಅಗತ್ಯಗಳ ಆಧಾರದ ಮೇಲೆ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
Advertisement