
ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಬುಧವಾರ ನಡೆದ ‘ದೇವನಹಳ್ಳಿ ಚಲೋ’ದ’ದಲ್ಲಿ ಪಾಲ್ಗೊಂಡ ರೈತರನ್ನು ಬಂಧಿಸಿದ್ದನ್ನು ಪ್ರಶ್ನಿಸಲು ಇಂದು ಸಿಎಂ ಗೃಹ ಕಚೇರಿಗೆ ಆಗಮಿಸಿದ್ದ ನಟ ಪ್ರಕಾಶ್ ರಾಜ್, ಹಿರಿಯ ಹೋರಾಟಗಾರರು ಮತ್ತು ಸಾಹಿತಿಗಳನ್ನು ಕುಮಾರಕೃಪಾ ಬಳಿ ಪೊಲೀಸರು ತಡೆದಿದ್ದಾರೆ. ಬಹಳ ಹೊತ್ತು ಕಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಅವಕಾಶ ನೀಡಲಾಗಿದೆ.
ಬಳಿಕ ಸಿಎಂ ಜೊತೆಗೆ ಸಮಾಲೋಚನೆ ನಡೆಸಿದ ಪ್ರಕಾಶ್ ರಾಜ್, 13 ಹಳ್ಳಿಗಳ ರೈತರು 1,777 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಕೆಐಎಡಿಬಿ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ನೀಡಬಾರದು. ಸರ್ಕಾರ ಏಕಪಕ್ಷೀಯ ನಿರ್ಧಾರ ಸರಿಯಲ್ಲ, ರೈತರು ಹಾಗೂ ಹೋರಾಟಗಾರರರ ಬಂಧನ ಖಂಡನೀಯ. ರೈತರ ಭೂಮಿಯನ್ನು ಕಸಿದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಫೈನಲ್ ನೋಟಿಫಿಕೇಷನ್ ಆಗಿದೆ. ಡಿನೋಟಿಫಿಕೇಷನ್ ಹೊರಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿ ನಮ್ಮ ಮಾತನ್ನು ಸಹಾನುಭೂತಿಯಿಂದ ಕೇಳಿಸಿಕೊಂಡಿದ್ದಾರೆ. ಜನರ ಹೋರಾಟಕ್ಕೆ ಹೋರಾಟಕ್ಕೆ ಸ್ಪಂದಿಸುವುದು ಮುಖ್ಯ. ಜುಲೈ 4 ರವರೆಗೂ ಹೋರಾಟ ಮುಂದುವರೆಸುತ್ತೇವೆ. 13 ಹಳ್ಳಿಗಳಲ್ಲಿ ಕುಟುಂಬದ ಜನರು ಸರ್ಕಾರದ ಮುಂದೆ ಕೈ ಚಾಚಿಲ್ಲ, ಕೈಗಾರಿಕೆಗಳಿಂದ ಏನಾಗಿದೆ ಎಂಬುದು ನಮಗೆ ತಿಳಿದಿದೆ ಎಂದರು.
ರೈತರ ಭೂಮಿಯನ್ನು ಕಿತ್ತುಕೊಂಡು ಟೆಕ್ ಪಾರ್ಕ್ ನಿರ್ಮಿಸಲು ಕಾಂಗ್ರೆಸ್ ಸರಕಾರ ಬಯಸುತ್ತಿದೆ. ಈ ರೈತರು ಮೂರೂವರೆ ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ ಬಿಜೆಪಿ ಆಡಳಿತದಲ್ಲಿ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಸಿಎಂ ಆಗಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಇದು ದ್ರೋಹವಾಗಿದೆ ಎಂದು ಟೀಕಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಹಳ್ಳಿಗಳ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಕೆಐಎಡಿಬಿ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ರಾಜ್ಯ ಸರ್ಕಾರ 10 ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಸಂಯುಕ್ತ ಹೋರಾಟ-ಕರ್ನಾಟಕ ದೇವನಹಳ್ಳಿ ಚಲೋ ಹೋರಾಟಕ್ಕೆ ಕರೆ ನೀಡಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಟ ಪ್ರಕಾಶ್ ರಾಜ್ ಸೇರಿದಂತೆ 52 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
Advertisement