ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ರಾಜ್ಯ ಬಿಜೆಪಿ ಘಟಕದ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ .ಮನೋಹರ್ ಈ ದೂರು ದಾಖಲಿಸಿದ್ದಾರೆ. ಜೂನ್ 25 ರಂದು ರಾಜ್ಯ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಿಂದ ಮಾಡಲಾದ ಫೋಸ್ಟ್ ನಲ್ಲಿ ಇಂದಿರಾ ಅಂದರೆ ಇಂಡಿಯಾ ಅಲ್ಲ, ಇಂದಿರಾ ಅಂದರೆ ಹಿಟ್ಲರ್ ಎಂದು ಬರೆಯಲಾಗಿತ್ತು. ಜೊತೆಗೆ ಅದರೊಂದಿಗೆ 38 ಸೆಕೆಂಡ್ ಗಳ ವಿಡಿಯೋ ಕೂಡಾ ಇತ್ತು. ಆದರೆ, ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ಪೋಸ್ಟ್ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಬಿಜೆಪಿ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರದ ಕಾರ್ಯವೈಖರಿ ಬಗ್ಗೆ ಶಾಸಕರ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಶಾಸಕ ರಾಜು ಕಾಗೆ ಅವರೊಂದಿಗೆ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಮೂವರು ನಾಯಕರಿಗೆ ಸಾರ್ವಜನಿಕವಾಗಿ ಮಾತನಾಡುವ ಮೊದಲು ತಮ್ಮೊಂದಿಗೆ ಚರ್ಚಿಸಬೇಕು ಎಂದು ಎಚ್ಚರಿಕೆ ನೀಡಿರುವುದು ತಿಳಿದುಬಂದಿದೆ. ಈ ಮಧ್ಯೆ ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಾಕಷ್ಟು ಶಕ್ತಿ ಕೇಂದ್ರಗಳಿದ್ದು, ಸೆಪ್ಟೆಂಬರ್ ನಂತರ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ. ಇದೇ ವೇಳೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಈ ವರ್ಷದ ಅಂತ್ಯದ ವೇಳೆಗೆ ರಾಜ್ಯ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಹೇಳಿದ್ದು ಯಾವುದೇ ಸಂಪುಟ ಪುನರ್ರಚನೆಯಂತಹ ದೊಡ್ಡ ಬದಲಾವಣೆಯನ್ನು ತಳ್ಳಿಹಾಕಿದ್ದಾರೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಬುಧವಾರ ನಡೆದ ‘ದೇವನಹಳ್ಳಿ ಚಲೋ’ದ’ದಲ್ಲಿ ಪಾಲ್ಗೊಂಡ ರೈತರನ್ನು ಬಂಧಿಸಿದ್ದಕ್ಕೆ ವ್ಯಾಪಕ ವಿರೋಧ, ಟೀಕೆ ವ್ಯಕ್ತವಾಗತೊಡಗಿದೆ. ರೈತರ ಬಂಧನವನ್ನು ನಟ ಪ್ರಕಾಶ್ ರಾಜ್, ಹಿರಿಯ ಹೋರಾಟಗಾರರು ಮತ್ತು ಸಾಹಿತಿಗಳು ಪ್ರಶ್ನಿಸಿದ್ದು, ಸಿಎಂ ಭೇಟಿಗಾಗಿ ಗೃಹ ಕಚೇರಿಗೆ ಆಗಮಿಸಿದ್ದ ಅವರನ್ನು ಬಹಳ ಹೊತ್ತು ಕಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಅವಕಾಶ ನೀಡಲಾಗಿದೆ. ಸಿಎಂ ಜೊತೆಗೆ ಸಮಾಲೋಚನೆ ನಡೆಸಿದ ಪ್ರಕಾಶ್ ರಾಜ್, 13 ಹಳ್ಳಿಗಳ ರೈತರು 1,777 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಕೆಐಎಡಿಬಿ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಯ ಪರಿಣಾಮ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಮಾರನಹಳ್ಳಿ ಬಳಿ ಭೂ ಕುಸಿತ ಸಂಭವಿಸಿದ ಕಾರಣ ಶಿರಾಡಿ ಘಾಟ್ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಬೆಂಗಳೂರು ಹಾಗೂ ಮಂಗಳೂರು ನಡುವೆ ಪ್ರಯಾಣಕ್ಕೆ ಬದಲಿ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ. ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ ಬಳಸುವಂತೆ ಸೂಚನೆ ನೀಡಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನ ಸವಾರರು ಕೊಡಗಿನ ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿ ಹಾಸನ ಡಿಸಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಗ್ಯಾಮ್ ಅರಣ್ಯ ಪ್ರದೇಶದ ಮೀಣ್ಯಂ ವನ್ಯಧಾಮದ ಮೀಸಲು ಅರಣ್ಯ ವಲಯದಲ್ಲಿ ತಾಯಿ ಹುಲಿ ಮತ್ತು ಅದರ 4 ಮರಿಗಳು ಅಸಹಜವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಅರಣ್ಯ ಇಲಾಖೆ ಮತ್ತು ಪ್ರಾಣಿಪ್ರೇಮಿಗಳಲ್ಲಿ ಆತಂಕ ಉಂಟುಮಾಡಿದ್ದು, ಯಾರೋ ಕಿಡಿಗೇಡಿಗಳು ವಿಷಪ್ರಾಶನ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ.
Advertisement