ಕಾರು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ಆರೋಪ: ಅನಂತ್ ಹೆಗಡೆ, ಇತರರ ವಿರುದ್ಧ ಬಲವಂತದ ಕ್ರಮ ಬೇಡ; ಹೈಕೋರ್ಟ್

ಸೈಫ್ ಖಾನ್ ಎಂಬುವರ ದೂರಿನ ಆಧಾರದ ಮೇಲೆ ದಾಬಸ್ಪೇಟೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಅನಂತಕುಮಾರ್, ಅವರ ಭದ್ರತಾ ಸಿಬ್ಬಂದಿ ಶ್ರೀಧರ್, ಕಾರು ಚಾಲಕ ಮಹೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Former MP Ananth Kumar Hegde
ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವುದು ಮತ್ತು ಮಾಜಿ ಸಂಸದ ಅನಂತಕುಮಾರ್ ಹೆಗಡೆ
Updated on

ಬೆಂಗಳೂರು: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ದಾಬಸ್‌ಪೇಟೆ ಸಮೀಪದ ಹಳೇ ನಿಜಗಲ್ ಬಳಿ ಇತ್ತೀಚೆಗೆ ನಡೆದಿದ್ದ ಗಲಾಟೆ ಪ್ರಕರಣ ಸಂಬಂಧ ಮಾಜಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಸೂಚಿಸಿದೆ.

ಸೈಫ್ ಖಾನ್ ಎಂಬುವರ ದೂರಿನ ಆಧಾರದ ಮೇಲೆ ದಾಬಸ್ಪೇಟೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಅನಂತಕುಮಾರ್, ಅವರ ಭದ್ರತಾ ಸಿಬ್ಬಂದಿ ಶ್ರೀಧರ್, ಕಾರು ಚಾಲಕ ಮಹೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್. ಕೃಷ್ಣಕುಮಾರ್ ಅವರ ಪೀಠ, ಪೊಲೀಸರು ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿದ್ದು, ಜುಲೈ 30 ರವರೆಗೆ ಅರ್ಜಿದಾರರ ವಿರುದ್ಧ ಬಂಧನ ಸೇರಿದಂತೆ ಯಾವುದೇ ಬಲವಂತದ ಅಥವಾ ಪ್ರಚೋದನಕಾರಿ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ. ಆದರೆ, ಪೊಲೀಸರು ತನಿಖೆಯನ್ನು ಮುಂದುವರಿಸಲು ಸ್ವತಂತ್ರರು ಮತ್ತು ಅರ್ಜಿದಾರರು ಸಹಕರಿಸಬೇಕು ಎಂದು ಸೂಚಿಸಿ ಮಧ್ಯಂತರ ತಡೆಯಾಜ್ಞೆ ನೀಡಿತು.

ಪ್ರಕರಣದ ಹಿನ್ನೆಲೆ:

ತುಮಕೂರಿನಲ್ಲಿ ಮದುಗೆ ಹೋಗಿ, 7 ಮಂದಿ ಇನ್ನೋವಾ ಕಾರಿನಲ್ಲಿ ಹಳೇ ನಿಜಗಲ್‌ ಬಳಿ ಬರುತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದ್ದಾರೆ.

ಇದರಿಂದ‌ ಕಾರಿನಲ್ಲಿದ್ದ ಸಲ್ಮಾನ್‌ ಖಾನ್‌ ಅವರ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್‌ ಖಾನ್‌ ದೂರು ನೀಡಿದ್ದರು.

ಅನಂತ್‌ ಕುಮಾರ್‌ ಹೆಗಡೆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್‌ ಕುಮಾರ್‌ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ದೂರು ನೀಡಿದ್ದರು. ಇದನ್ನು ಆಧರಿಸಿ ದಾಬಸ್‌ ಠಾಣೆಯ ಪೊಲೀಸರು ಅನಂತ್‌ ಕುಮಾರ್‌ ಹೆಗಡೆ, ಭದ್ರತಾ ಸಿಬ್ಬಂದಿ ಶ್ರೀಧರ್‌ ಹಾಗೂ ಕಾರು ಚಾಲಕ ಮಹೇಶ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 117, 126, 74, 351(4) ಪ್ರಕರಣ ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com