ಮಲೈ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದ್ದು ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂಬ ಅನುಮಾನ ಮೂಡಿಸಿದೆ. ದುಷ್ಕರ್ಮಿಗಳು ಹಸುವಿನ ಮಾಂಸಕ್ಕೆ ವಿಷಪ್ರಾಶನ ಮಾಡಿದ್ದು ಅದನ್ನು ತಿಂದ ನಂತರ ಹುಲಿ ಮತ್ತು ಅದರ ಮರಿಗಳು ಸಾವನ್ನಪ್ಪಿದೆ ಎಂದು ಸಿಸಿಎಫ್ ಹೀರಾಲಾಲ್ ದೃಢಪಡಿಸಿದ್ದಾರೆ. ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದರು. ಹೀಗಾಗಿ ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರನ್ನೂ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಮೃತಪಟ್ಟ ಹಸುವಿನ ಮಾಲೀಕರು ಯಾರೆಂಬುದು ಪತ್ತೆ ಮಾಡಲಾಗುತ್ತಿದೆ. ಅಲ್ಲದೆ ಘಟನೆ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯ ಸರ್ಕಾರವು ಹುಲಿ ಮತ್ತು ಅದರ ಮರಿಗಳ ಸಾವಿನ ತನಿಖೆಗಾಗಿ ಸಮಿತಿಯನ್ನು ರಚಿಸುವುದರ ಜೊತೆಗೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಇಬ್ಬರು ಸದಸ್ಯರ ಎಸ್‌ಐಟಿಯನ್ನು ಸಹ ರಚಿಸಿದೆ. ತನಿಖಾ ವರದಿ ಸಲ್ಲಿಸಲು ಎನ್‌ಟಿಸಿಎ ಸಮಿತಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.
ರೈತರು ಮತ್ತು ದೇವಾಲಯಗಳ ಆಸ್ತಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನಾ ರ್ಯಾಲಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ದಾಖಲಾಗಿದ್ದ ಎರಡು ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಆದೇಶ ಹೊರಡಿಸಿದ್ದಾರೆ. ಧರ್ಮ ಅಥವಾ ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದಕ್ಕೆ ಸಂಬಂಧಿಸಿದಂತೆ ಶಿಗ್ಗಾಂವಿ ಪೊಲೀಸ್ ಠಾಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಪಡಿಸುವಂತೆ ಬೊಮ್ಮಾಯಿ ಕೋರ್ಟ್ ಮೆಟ್ಟಿಲೇರಿದ್ದರು.
ಕೆ.ಆರ್.ಎಸ್ ಡ್ಯಾಂ ಬಳಿ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ಸ್ಥಾಪನೆ ಕಾಮಗಾರಿ ಮತ್ತು ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್, ಸಿಎಂ.ಜೋಷಿ ಅವರಿದ್ದ ಪೀಠ ರಾಜ್ಯ ಸರ್ಕಾರಕ್ಕೆ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್ ನೀಡಿ ವಿವರಣೆ ಕೋರಿದೆ. ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾದರು. ಡ್ಯಾಮ್ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ. ಅಲ್ಲದೆ ಕಾಮಗಾರಿಗೆ ಯಂತ್ರಗಳನ್ನು ಉಪಯೋಗಿಸಿರುವ ಫೋಟೊ ಸಲ್ಲಿಕೆ ಮಾಡಲಾಗಿದೆ. ಸದ್ಯಕ್ಕೆ ಕಾವೇರಿ ಪ್ರತಿಮೆ ಮಾತ್ರ ಸ್ಥಾಪಿಸಲು ಟೆಂಡರ್ ನೀಡಲಾಗಿದೆ. ಕಾವೇರಿ ಪ್ರತಿಮೆ ಸ್ಥಾಪನೆಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ. ಮನರಂಜನಾ ಪಾರ್ಕ್ ಟೆಂಡರ್ ಪೂರ್ಣಗೊಂಡಿಲ್ಲವೆಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ರಾಜ್ಯದಲ್ಲಿ ಮಾದಕ ದ್ರವ್ಯ ಜಾಲ ಮಟ್ಟ ಹಾಕಲು ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತುರ್ತು ನೆರವಿಗಾಗಿ Raksha QR ಕೋಡ್‌ಗೆ ಚಾಲನೆ ನೀಡಿದೆ. 66ನೇ ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ರಕ್ಷಾ ಕ್ಯೂಆರ್ ಕೋಡ್‌ಗೆ ಚಾಲನೆ ನೀಡಿದರು. ಮಾದಕ ವಸ್ತು ವ್ಯಸನಕ್ಕೆ ಸಿಲುಕಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ರಾಜ್ಯದ ಸರಿ ಸುಮಾರು 6.5 ಲಕ್ಷ ವಿದ್ಯಾರ್ಥಿಗಳಿಗೆ ಡ್ರಗ್ಸ್ ದುಷ್ಪರಿಣಾಮ ಕುರಿತು ಅರಿವು ಮೂಡಿಸಲಾಗಿದೆ. ಪ್ರತಿ ತಿಂಗಳು ತಮ್ಮ ಠಾಣಾ ಸರಹದ್ದಿನ ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ ಎಂದು ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಪವರ್ ಸೆಂಟರ್ ಜಾಸ್ತಿಯಾಗಿವೆ. ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹವಿಲ್ಲ. ಕೆಎನ್ ರಾಜಣ್ಣ ಅವರ ಹೇಳಿಕೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದರು. ವಿಧಾನಸೌಧಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಯಾಗಬಹುದು ಎಂದು ರಾಜಣ್ಣ ಹೇಳಿದ್ದಾರೆ. ಇಂಥದ್ದೇ ಆಗುತ್ತದೆ ಎಂದು ಹೇಳಿದ್ದಾರಾ ಎಂದು ಪ್ರಶ್ನಿಸಿದರು.
Advertisement