
ಮಂಡ್ಯ: ರೈತರ ಜೀವನಾಡಿ’ಯಾದ ಕೃಷ್ಣರಾಜಸಾಗರ ಜಲಾಶಯವು ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ.
ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿರುವ ಸಂಭ್ರಮದ ಅಂಗವಾಗಿ ಜೂನ್ 30ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4ನೇ ಬಾರಿಗೆ ಬಾಗಿನ ಅರ್ಪಿಸಲಿದ್ದಾರೆ. ಈಗಾಗಲೇ 2013, 2014, 2024 ಈ ಮೂರು ವರ್ಷ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ 121 ಅಡಿ ನೀರಿದ್ದು, ಭರ್ತಿಗೆ 3 ಅಡಿ ಮಾತ್ರ ಬಾಕಿ ಇದೆ. ಜೂನ್ 29ರ ವೇಳೆಗೆ ಡ್ಯಾಂ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ, ಜಲಾಶಯ ಜೂನ್‌ನಲ್ಲೇ ಭರ್ತಿಯಾಗಿದೆ. ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣವಾದ 1931ನೇ ಸಾಲಿನಿಂದ ಇಲ್ಲಿಯವರೆಗೆ ಅಂದರೆ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗುತ್ತಿರುವುದು ರೈತರ ಸಂತಸ ಹೆಚ್ಚಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನಲ್ಲಿ ಕಾವೇರಿ ನದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 30 ರಂದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಸಿಎಂ ಗೆ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲ ಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದ ಹೆಚ್ ಡಿ ಕುಮಾರಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಸೇರಿದಂತೆ ಹಲವು ನಾಯಕರು ಸಾಥ್ ಕೊಡಲಿದ್ದಾರೆ.
Advertisement