
ಮೈಸೂರು: ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕಾವೇರಿ ನೀರಾವರಿ ನಿಗಮ ಲಿಮಿಟೆಡ್ (ಸಿಎನ್‌ಎನ್‌ಎಲ್) ನೀಡಿರುವ ಮಾಹಿತಿಗಳ ಪ್ರಕಾರ, ಜೂನ್ 23 ರಂದು ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಕೆಆರ್‌ಎಸ್‌ಗೆ ಒಳಹರಿವು 13,856 ಕ್ಯೂಸೆಕ್‌ಗಳಷ್ಟಿದ್ದು, ನೀರಿನ ಮಟ್ಟವು 124.80 ಅಡಿಗಳ ಪೂರ್ಣ ಸಾಮರ್ಥ್ಯಕ್ಕೆ 120.20 ಅಡಿಗಳಷ್ಟಿದೆ. ಜಲಾಶಯ ಪೂರ್ಣ ಭರ್ತಿಗೆ ಇನ್ನು ಕೇವಲ 4.60 ಅಡಿಗಳಷ್ಟು ಮಾತ್ರ ಬಾಕಿಯಿದೆ ಎಂದು ತಿಳಿದುಬಂದಿದೆ.
ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆ ಮತ್ತು ಒಳಹರಿವಿನ ಹೆಚ್ಚಳವನ್ನು ಗಮನಿಸಿದರೆ, ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಗಮನಾರ್ಹ ಪ್ರಮಾಣದ ನೀರನ್ನು ಬಿಡುಗಡೆ ಮಾಡುವ ಅಗತ್ಯ ಎದುರಾಗಬಹುದು.
ಈ ಹಿನ್ನೆಲೆಯಲ್ಲಿ, ಕಾವೇರಿ ನದಿಯ ದಡದಲ್ಲಿ ಮತ್ತು ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ವಿಳಂಬವಿಲ್ಲದೆ ಸುರಕ್ಷಿತ ಸ್ಥಳಗಳಿಗೆ ತೆರಳಲುವಂತೆ ಸೂಚಿಸಲಾಗಿದೆ ಎಂದು ಸಿಎನ್‌ಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ತ್ವರಿತವಾಗಿ ಕಾರ್ಯನಿರ್ವಹಿಸಲು ನಿರ್ದೇಶಿಸಲಾಗಿದೆ. "ನೀರಾವರಿ ಇಲಾಖೆ, ಕಂದಾಯ ಇಲಾಖೆ ಮತ್ತು ನದಿ ಜಲಾನಯನ ಪ್ರದೇಶದ ಆಯಾ ತಹಶೀಲ್ದಾರ್‌ಗಳ ಎಲ್ಲಾ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಗ್ರಾಮಸ್ಥರಿಗೆ ಸಂಭಾವ್ಯ ಅಪಾಯದ ಬಗ್ಗೆ ತಿಳಿಸಬೇಕು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಅವರಿಗೆ ಸಹಾಯ ಮಾಡಬೇಕು ಮತ್ತು ಯಾವುದೇ ಸಾರ್ವಜನಿಕ ಅನಾನುಕೂಲತೆಯನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಿಎನ್‌ಎನ್ಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement