
ಮೈಸೂರು: ಪ್ರವಾಸೋಧ್ಯಮ ಅಭಿವೃದ್ಧಿಯನ್ನು ಗುರಿಯಿಂದ ಕೃಷ್ಣರಾಜಸಾಗರ ಜಲಾಶಯದ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಯೋಜನೆಗೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರವಾಸೀ ಕೇಂದ್ರವಾಗಿ ಕೃಷ್ಣರಾಜಸಾಗರ ಈಗಾಗಲೇ ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೆಆರ್ಎಸ್ಅಣೆಕಟ್ಟೆ ನಿರ್ಮಾಣಗೊಂಡು 100 ವರ್ಷ ಸಮೀಪಿಸುತ್ತಿದೆ. ಅಣೆಕಟ್ಟೆ ಭದ್ರತೆ ಸೂಕ್ಷ್ಮ ವಿಚಾರವಾಗಿರುವುದರಿಂದ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕೆಆರ್ಎಸ್ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣವಾಗುವುದಕ್ಕೆ ರೈತ ಸಂಘಟನೆಗಳು ಹಾಗೂ ಆ ಭಾಗದ ರೈತರು ವಿರೋಧಿಸುತ್ತಿದ್ದಾರೆಯೇ ಹೊರತು, ಆ ಯೋಜನೆ ಬೇರೆಡೆ ನಿರ್ಮಾಣ ಮಾಡುವುದಕ್ಕೆ ಯಾರಿಂದಲೂ ವಿರೋಧವಿಲ್ಲ. ರೈತರಿಂದ ವ್ಯಕ್ತವಾಗುತ್ತಿರುವ ಭಾವನೆಗಳಿಗೆ ಪ್ರಥಮ ಆಧ್ಯತೆ ನೀಡುತ್ತಿದ್ದು, ಈ ಯೋಜನೆಗೆ ನಮ್ಮ ವಿರೋಧವೂ ಇದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಅತಿರಂಜಿತ ಪ್ರವಾಸಿ ಆಕರ್ಷಣೆಗಳಿಗಿಂತ ಮೂಲಭೂತ ಮೂಲಸೌಕರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. 100 ವರ್ಷ ಹಳೆಯದಾದ ಅಣೆಕಟ್ಟಿನ ಸುರಕ್ಷತೆ ಮತ್ತು ಪರಿಸರ ಸಮತೋಲನಕ್ಕೆ ನಾವು ಆದ್ಯತೆ ನೀಡಬೇಕು. ಕೆಆರ್‌ಎಸ್ ಪ್ರದೇಶದ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ರಕ್ಷಿಸಬೇಕು. ಅಲ್ಲಿನ ಜನರಿಗೆ ಬೇಕಿರುವುದು ಉತ್ತಮ ಸೌಲಭ್ಯಗಳೇ ಹೊರತು ಮನೋರಂಜನಾ ಉದ್ಯಾನವನವಲ್ಲ ಎಂದು ಹೇಳಿದರು.
ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸದಿದ್ದರೂ ಕೆಆರ್‌ಎಸ್ ಸುತ್ತಮುತ್ತಲಿನ ಪ್ರದೇಶವು ಪರಿಸರ ಸೂಕ್ಷ್ಮ ವಲಯವಾಗಿದೆ. ಇಂತಹ ಯಾವುದೇ ಯೋಜನೆಗಳೊಂದಿಗೆ ಮುಂದುವರಿಯುವ ಮೊದಲು ರಾಜ್ಯ ಸರ್ಕಾರ ರೈತರು ಮತ್ತು ಸ್ಥಳೀಯ ನಿವಾಸಿಗಳಿಂದ ಅಭಿಪ್ರಾಯಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಕೆ.ಆರ್.ಎಸ್. ಸುತ್ತಮುತ್ತ ಉತ್ತಮವಾದ ಪರಿಸರವಿದೆ. ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಿನಿಂದ ಕೂಡಿದ ಭೂಮಿ ಇದೆ. ಜೀವವೈವಿಧ್ಯ ಸೂಕ್ಷ್ಮ ವಲಯ ಇರುವುದರಿಂದ ಅಲ್ಲಿ ಯೋಜನೆ ಜಾರಿಯಾದರೆ ಪರಿಸರಕ್ಕೆ ದೊಡ್ಡ ಅನಾಹುತವಾಗಲಿದೆ. ಆ ದೃಷ್ಠಿಯಿಂದ ರೈತರು ಮತ್ತು ಸಂಘಟನೆಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಿ, ಪ್ರವಾಸೋಧ್ಯಮ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಹೇಳಿದರು.
ಇದೇ ವೇಳೆ ಕಾವೇರಿ ಆರತಿಗೆ ರಾಜ್ಯ ಸರ್ಕಾರ 100 ಕೋಟಿ ರೂ. ಖರ್ಚು ಮಾಡುತ್ತಿರುವುದನ್ನು ಅವೈಜ್ಞಾನಿಕ ಎಂದ ಅವರಪು, ಇಷ್ಟೊಂದು ಹಣವನ್ನು ದುಂದು ವೆಚ್ಚ ಮಾಡುವುದು ಸರಿಯಲ್ಲ, ಬಿಜೆಪಿಯವರಿಗೆ ಇದನ್ನು ವಹಿಸಿಕೊಟ್ಟರೆ ನಾವೇ ಉಚಿತವಾಗಿ ಕಾವೇರಿ ಆರತಿ ಮಾಡುತ್ತೇವೆಂದು ತಿರುಗೇಟು ನೀಡಿದರು.
Advertisement