ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ತ ಹಸುವಿನ ಮಾಲೀಕ ಮಾದುರಾಜು, ನಾಗರಾಜ್ ಹಾಗೂ ಕೋನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಮಾದುರಾಜು ಪ್ರೀತಿಯಿಂದ ಸಾಕಿದ್ದ 'ಕೆಂಚಿ' ಎಂಬ ಹೆಸರಿನ ಹಸುವನ್ನು ಹುಲಿಗಳು ಬೇಟೆಯಾಡಿ ಕೊಂದ ನಂತರ ಮಾದುರಾಜು ಕೋಪಗೊಂಡಿದ್ದ ಎಂದು ವರದಿಯಾಗಿದೆ. ಈ ನಷ್ಟದ ಸೇಡು ತೀರಿಸಿಕೊಳ್ಳಲೆಂದು ಮೃತಪಟ್ಟಿದ್ದ ಹಸುವಿನ ದೇಹದ ಮೇಲೆ ಸ್ನೇಹಿತರಾದ ಕೋನಪ್ಪ ಮತ್ತು ನಾಗರಾಜು ಅವರೊಡನೆ ಸೇರಿಕೊಂಡು ವಿಷವನ್ನು ಸಿಂಪಡಿಸಿದ್ದಾನೆ. ಆರಂಭದಲ್ಲಿ ಹಸುವನ್ನು ಬೇಟೆಯಾಡಿದ್ದ ಹುಲಿ, ತನ್ನ ಮರಿಗಳೊಂದಿಗೆ ಬಂದು ಮತ್ತೆ ಅದನ್ನು ತಿಂದಾಗ ವಿಷದಿಂದಾಗಿ ಸಾವಿಗೀಡಾಗಿವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಈಮಧ್ಯೆ, ಅತ್ತ ಬಂಡೀಪುರ ಹುಲಿ ಅಭಯಾರಣ್ಯ ವ್ಯಾಪ್ತಿಯ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಐದು ವರ್ಷದ ಹುಲಿಯ ಮೃತ ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿ ಸಹಜ ಕಾರಣಗಳಿಂದ ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಬಾರಿಯ ಮೈಸೂರು ದಸರಾ ಉತ್ಸವ 11 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉನ್ನತ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉತ್ಸವ ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ. ಈ ಬಾರಿ 10 ದಿನಗಳ ಬದಲಿಗೆ 11 ದಿನಗಳ ಕಾಲ ಉತ್ಸವ ನಡೆಯಲಿದೆ ಎಂದರು. ಕಳೆದ ವರ್ಷ ದಸರಾ ಆಚರಣೆಗೆ 40 ಕೋಟಿ ನೀಡಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ಅಗತ್ಯವಾದಷ್ಟು ಅನುದಾನ ಒದಗಿಸಲಾಗುವುದು ಎಂದರು. ಈ ಬಾರಿಯ ಸ್ತಬ್ಧಚಿತ್ರಗಳು ವೈವಿಧ್ಯಮಯವಾಗಿರಬೇಕು. ಅಲ್ಲದೆ ಸ್ತಬ್ಧಚಿತ್ರಗಳಲ್ಲಿ ಗಾಂಧೀಜಿ ವಿಚಾರಧಾರೆಗಳಿಗೆ ಅವಕಾಶ ಕಲ್ಪಿಸಬೇಕು ಎಂದರು.
ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಿಮ್ಹಾನ್ಸ್ನ 300 ಹಾಸಿಗೆಗಳುಳ್ಳ ಪಾಲಿ ಟ್ರಾಮಾ ಘಟಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಇದು ಬೆಂಗಳೂರು ನಗರದಾದ್ಯಂತ ಅಪಘಾತಕ್ಕೀಡಾದವರಿಗೆ ತುರ್ತು ಆರೈಕೆ ಮತ್ತು ಜೀವ ಉಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು. ವಿಮಾನ ನಿಲ್ದಾಣ ಬಳಿಯ ಕ್ಯಾಲಸನಹಳ್ಳಿಯಲ್ಲಿ 498 ಕೋಟಿ ರೂ. ವೆಚ್ಚದಲ್ಲಿ ನಿಮ್ಹಾನ್ಸ್ ಸ್ನಾತಕೋತ್ತರ ಮತ್ತು 300 ಹಾಸಿಗೆಗಳುಳ್ಳ ಪಾಲಿ ಟ್ರಾಮಾ ಕೇಂದ್ರದ ನಿರ್ಮಾಣವಾಗಲಿದೆ. ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಈ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದರು.
ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕಳೆದ ಬುಧವಾರ ಬೆಂಗಳೂರು ಸೇರಿದಂತೆ ರಾಜ್ಯದ 17 ಕಡೆ ದಾಳಿ ನಡೆಸಿದ್ದರು. ಬೆಂಗಳೂರಿನ ಮೂರು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಕೋಟಾದ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಗದು ರೂಪದಲ್ಲಿ ಹಣ ಪಡೆದು ಸೀಟ್ ಹಂಚಿಕೆ ಮಾಡುತ್ತಿವೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ನ್ಯೂ ಹಾರಿಜಾನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮೇಲೆ ದಾಳಿ ನಡೆಸಿದ್ದು ಪ್ರಕರಣದ ಕಿಂಗ್‌ಪಿನ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರದ ವರದಿಯನ್ನು ಅಂಗೀಕರಿಸಿ ಕೇಂದ್ರ ಡಿಪಿಎಆರ್‌ಗೆ ಮಾಹಿತಿ ರವಾನೆ ಮಾಡಿದೆ. ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಎಂಬ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು.
Advertisement