
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಅಭಯಾರಣ್ಯ ವ್ಯಾಪ್ತಿಯ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಐದು ವರ್ಷದ ಹುಲಿಯ ಮೃತ ದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಗುರುವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಹೆಣ್ಣು ಹುಲಿಯ ಮೃತ ದೇಹ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ನಡೆಸಿದ ಮರಣೋತ್ತರ ಪರೀಕ್ಷೆಯ ನಂತರ, ಹುಲಿ ಸಹಜ ಕಾರಣಗಳಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿ, ಹುಲಿ ಹಸಿವು ಮತ್ತು ಇತರ ಹುಲಿಗಳೊಂದಿಗೆ ಕಾದಾಟದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.
ಈ ಹುಲಿಯು ಇತರ ಹುಲಿಗಳೊಂದಿಗೆ ಕಾದಾಟದಲ್ಲಿ ಭಾಗಿಯಾಗಿತ್ತು ಮತ್ತು ನಂತರ ಬೇಟೆಯಾಡಲು ಸಾಧ್ಯವಾಗದ ಕಾರಣ ಹಸಿವಿನಿಂದ ಬಳಲುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಅದರ ಹೊಟ್ಟೆ ಅಥವಾ ಕರುಳಿನೊಳಗೆ ಯಾವುದೇ ಆಹಾರ ಕಂಡುಬಂದಿಲ್ಲ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಇನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ನಿಗೂಢ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಖಚಿತವಾಗಿದೆ. ಆದರೆ ಈ ವಿಷ ಯಾವುದು? ಎಷ್ಟು ಪ್ರಮಾಣದಲ್ಲಿ ಹಾಕಲಾಗಿತ್ತು ಅಂತಾ ತಿಳಿಯಲು ಲ್ಯಾಬ್‌ಗೆ ಸ್ಯಾಂಪಲ್ ಕಳಿಸಲಾಗಿದೆ. ಹಸುವಿನ ಮೇಲೆ ದಾಳಿ ನಡೆಸಿದ ಸೇಡಿಗೆ ವಿಷವಿಟ್ಟಿರುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಶಂಕಿತ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Advertisement