
ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ಅರಣ್ಯ ವಲಯದಲ್ಲಿ ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ಸಂಬಂಧಿಸಿದಂತೆ ಶನಿವಾರ ಸತ್ತ ಹಸುವಿನ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಹುಲಿಗಳ ಕಳೇಬರ ಪತ್ತೆಯಾಗಿದ್ದು, ನಂತರದ ತನಿಖೆಯಲ್ಲಿ ಅವುಗಳಿಗೆ ವಿಷಪ್ರಾಶನ ಮಾಡಿರುವುದು ತಿಳಿದುಬಂದಿದೆ. ಈ ಘಟನೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.
ಹುಲಿಗಳು ಮೃತಪಟ್ಟಿದ್ದ ಜಾಗದ ಸಮೀಪವೇ ಮಾದ ಅಲಿಯಾಸ್ ಮಾದುರಾಜು ಎಂಬಾತನಿಗೆ ಸೇರಿದ ಹಸುವಿನ ಮೃತದೇಹ ಪತ್ತೆಯಾದ ನಂತರ ವಿಷಪ್ರಾಶನ ಮಾಡಿರುವ ಕುರಿತು ಬೆಳಕಿಗೆ ಬಂದಿತ್ತು.
ಅರಣ್ಯ ಅಧಿಕಾರಿಗಳ ಪ್ರಕಾರ, ಪ್ರೀತಿಯಿಂದ ಸಾಕಿದ್ದ 'ಕೆಂಚಿ' ಎಂಬ ಹೆಸರಿನ ಹಸುವನ್ನು ಹುಲಿಗಳು ಬೇಟೆಯಾಜಿ ಕೊಂದ ನಂತರ ಮಾದುರಾಜು ಕೋಪಗೊಂಡಿದ್ದ ಎಂದು ವರದಿಯಾಗಿದೆ. ಈ ನಷ್ಟದ ಸೇಡು ತೀರಿಸಿಕೊಳ್ಳಲೆಂದು ಮೃತಪಟ್ಟಿದ್ದ ಹಸುವಿನ ದೇಹದ ಮೇಲೆ ವಿಷವನ್ನು ಸಿಂಪಡಿಸಿದ್ದಾನೆ. ಮಾದುರಾಜು ಸ್ನೇಹಿತರಾದ ಕೋನಪ್ಪ ಮತ್ತು ನಾಗರಾಜು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಆರಂಭದಲ್ಲಿ ಹಸುವನ್ನು ಬೇಟೆಯಾಡಿದ್ದ ಹುಲಿ, ತನ್ನ ಮರಿಗಳೊಂದಿಗೆ ಬಂದು ಮತ್ತೆ ಅದನ್ನು ತಿಂದಾಗ ವಿಷದಿಂದಾಗಿ ಸಾವಿಗೀಡಾಗಿವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಮೂವರು ಶಂಕಿತರನ್ನು ಹೆಚ್ಚಿನ ವಿಚಾರಣೆಗಾಗಿ ಹನೂರು ತಾಲ್ಲೂಕಿನ ಮೀಣ್ಯಂ ಮೂಲದ 'ಅರಣ್ಯ ಭವನ'ಕ್ಕೆ ಕರೆದೊಯ್ಯಲಾಗಿದೆ.
ತನಿಖೆಯ ಸಮಯದಲ್ಲಿ, ಮಾದುರಾಜು ತಂದೆ ಶಿವಣ್ಣ ಪೊಲೀಸರನ್ನು ಸಂಪರ್ಕಿಸಿ ಹುಲಿಗಳ ಸಾವಿಗೆ ತಾನೇ ಕಾರಣ ಎಂದು ಹೇಳಿಕೊಂಡಿದ್ದರು. ಆದರೆ, ತನಿಖೆಯಲ್ಲಿ ಅವರ ಮಗ ಭಾಗಿಯಾಗಿರುವುದು ಬಹಿರಂಗವಾದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
Advertisement