ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಥಳಿತ; ಕೇಸ್ ದಾಖಲು
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ ಕ್ಷುಲ್ಲಕ ಕಾರಣಕ್ಕೆ 67 ವರ್ಷದ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.
ವೃದ್ಧೆಯನ್ನು ಆಕೆಯ ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ, ಕಂಬಕ್ಕೆ ಕಟ್ಟಿ ನೆರೆಹೊರೆಯವರು ಕ್ರೂರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೂನ್ 24 ರ ಬೆಳಗ್ಗೆ ಈ ಘಟನೆ ನಡೆದಿದ್ದರೂ, ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಮರುದಿನ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಹುಚ್ಚಮ್ಮ ಎಂಬ ವೃದ್ಧೆ, ತಮ್ಮ ಮನೆಯ ಮುಂದೆ ಪ್ರೇಮ ಎಂಬ ಮಹಿಳೆ ಕಸ ತಂದು ಹಾಕಿದ್ದನ್ನು ಪ್ರಶ್ನಿಸಿದ್ದರು. ಈ ಸಣ್ಣ ವಿಷಯಕ್ಕೆ ಕೋಪಗೊಂಡ ಪ್ರೇಮ, ಜೊತೆಗೆ ಮಂಜುನಾಥ್ ಮತ್ತು ದರ್ಶನ್ ಎಂಬ ಇಬ್ಬರು ಯುವಕರು, ಹುಚ್ಚಮ್ಮನವರನ್ನು ನಿಂದಿಸಿ, ಮನೆಯಿಂದ ಎಳೆದುಕೊಂಡು ಹೋಗಿ ಮರಕ್ಕೆ ಹಗ್ಗದಿಂದ ಕಟ್ಟಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹುಚ್ಚಮ್ಮ ಅವರ ಮಗ ಕಣ್ಣಪ್ಪ, ತನ್ನ ವೃದ್ಧ ಪೋಷಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಭದ್ರತೆ ಒದಗಿಸುವಂತೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ