
ದಾವಣಗೆರೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 30,000 ದಂಡ ವಿಧಿಸಿ ಸ್ಥಳೀಯ ನ್ಯಾಯಾಲಯೊಂದು ಶನಿವಾರ ತೀರ್ಪು ಪ್ರಕಟಿಸಿದೆ.
ಬಾಲಕಿಯ ತಂದೆ ನೀಡಬೇಕಾಗಿದ್ದ ರೂ.10,000 ಸಾಲ ವಸೂಲಿ ನೆಪದಲ್ಲಿ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಧೀಶ ಶ್ರೀರಾಮ ನಾರಾಯಣ್ ಹೆಗ್ಡೆ ಜೈಲುಶಿಕ್ಷೆ ಆದೇಶ ಪ್ರಕಟಿಸಿದರು. ಪ್ರಾಸಿಕ್ಯೂಟರ್ ಬಿ. ಸುನಂದಾ ಮಡಿವಾಳರ ಸಂತ್ರಸ್ತೆ ಪರವಾಗಿ ವಾದ ಮಂಡಿಸಿದರು.
ಆರೋಪಿ ಉಸ್ಮಾನ್ ವಿರುದ್ಧ ನವೆಂಬರ್ 16, 2006ರಂದು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂತ್ರಸ್ತೆ ತಂದೆಗೆ ರೂ.10,000 ಸಾಲ ನೀಡಿದ್ದ ಉಸ್ಮಾನ್ ಸಾಲ ವಸೂಲಿ ನೆಪದಲ್ಲಿ ಆಗಾಗ್ಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ. ಅನಾರೋಗ್ಯದಿಂದ ಸಂತ್ರಸ್ತೆ ತಂದೆ ಮೃತಪಟ್ಟ ನಂತರ ಆಕೆಯ ಮನೆಗೆ ಭೇಟಿ ನೀಡುವುದನ್ನು ಹೆಚ್ಚಿಸಿದ ಉಸ್ಮಾನ್, ಬಾಲಕಿ ಮನೆಯಲ್ಲಿ ಒಂಟಿಯಾಗಿ ಇರುವಾಗ ಅತ್ಯಾಚಾರವಸೆಗಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಹಿಂದೆ ಇದೇ ರೀತಿಯ ಅಪರಾಧಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ವಿವಿಧ ಶಿಕ್ಷೆಯ ಪ್ರಮಾಣವನ್ನು ಘೋಷಿಸಿತ್ತು.
ಮೇ 21, 2023 ರಂದು ಕರ್ನಾಟಕ ವಿಶೇಷ ನ್ಯಾಯಾಲಯವು ಬೆಂಗಳೂರಿನಲ್ಲಿ ನಡೆದಿದ್ದ ಬಾಂಗ್ಲಾದೇಶದ ಮಹಿಳೆಯೊಬ್ಬರ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ 12 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತು.ಅವರಲ್ಲಿ ಏಳು ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡುವುದೊಂದಿಗೆ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗಿತ್ತು.
Advertisement