
ಬೆಂಗಳೂರು: ಸದ್ಯದ ರಾಜ್ಯ ರಾಜಕೀಯದಲ್ಲಿ ಮುಂದಿನ ಸಿಎಂ ಕುರಿತು ಜೋರಾದ ಚರ್ಚೆ ನಡೆಯುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಬಿಂದುವಾಗಿದ್ದಾರೆ. ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರ ಇತ್ತೀಚಿನ ಹೆಜ್ಜೆಗಳು, ಹಿಂದೂತ್ವದ ಬಗ್ಗೆಗಿನ ನಿಲುವುಗಳು ತೀವ್ರ ಕುತೂಹಲ ಕೆರಳಿಸಿವೆ.
ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಲು ಇನ್ನೂ ಕೆಲವೇ ದಿನಗಳು ಬಾಕಿಇರುವಂತೆಯೇ ಮುಂದಿನ ಸಿಎಂ ಚರ್ಚೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಆಂತರಿಕ ಭಿನ್ನಮತವೂ ಹೊರಗೆ ಬರುತ್ತಿದೆ.
ಎದುರಾಳಿಗೆ ಎದಿರೇಟು: ಒಂದೆಡೆ ಸಿಎಂ ಸಿದ್ದರಾಮಯ್ಯ ಪರ ಶಾಸಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ದಲಿತ ಸಿಎಂ ಸ್ಥಾನದ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ ಎಚ್ಚೆತ್ತುಗೊಂಡ ಡಿಸಿಎಂ ಡಿಕೆ ಶಿವಕುಮಾರ್ ಹಿಂದುತ್ವ ಹಾಗೂ ಅಮಿತ್ ಶಾ ಅವರಂತಹ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ರಾಜಕೀಯ ಎದುರಾಳಿಗೆ ಎದಿರೇಟು ನೀಡುತ್ತಿದ್ದಾರೆ. ಅಲ್ಲದೇ ಹೈಕಮಾಂಡ್ ಗೂ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ.
ದೇವರು ವರ, ಶಾಪ ಕೊಡುವುದಿಲ್ಲ: ದೇವರು ವರ-ಶಾಪಗಳನ್ನು ಕೊಡುವುದಿಲ್ಲ, ಬದಲಾಗಿ ಅವಕಾಶಗಳನ್ನು ಮಾಡಿಕೊಡುತ್ತಾನೆ ಎಂದು ಆಗಾಗ್ಗೆ ಹೇಳುವ ಡಿಕೆ ಶಿವಕುಮಾರ್, ಹೇಗಾದರೂ ಮಾಡಿ ಸಿಎಂ ಆಗಲೇಬೇಕೆಂದು ಪಟ್ಟು ಹಿಡಿದಿದ್ದು, ಅದಕ್ಕಾಗಿ ಒಂದೊಂದು ದಾಳ ಉರುಳಿಸುತ್ತಿದ್ದಾರೆ. ದೇವಾಲಯಗಳ ಭೇಟಿ, ವಿಶೇಷ ಪಾರ್ಥನೆ, ಪೂಜೆ, ಪುನಸ್ಕಾರಗಳ ನಡುವೆ ಅವರ ಹಿಂದೂತ್ವ ಕುರಿತ ಹೇಳಿಕೆಗಳು ಅವರ ಅಭಿಮಾನಿ ಬಳಗವನ್ನು ಹೆಚ್ಚಿಸಿದ್ದು, ಬಿಜೆಪಿ ಜೊತೆಗೆ ಸೇರಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ಕರ್ನಾಟಕದ ಶಿಂಧೆ: ಅದರಲ್ಲೂ ಶಿವರಾತ್ರಿ ಹಬ್ಬದಂದು ತಮಿಳುನಾಡಿನ ಈಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರ ಜೊತೆಗೆ ವೇದಿಕೆ ಹಂಚಿಕೊಂಡ ಬಳಿಕ ಬಿಜೆಪಿಯು ಅವರತ್ತು ಆಕರ್ಷಿತಗೊಂಡಿದ್ದು, ಡಿಕೆ ಶಿವಕುಮಾರ್ ಮುಂದಿನ ಕರ್ನಾಟಕದ ಶಿಂಧೆ ಆಗಲಿದ್ದಾರೆ ಎನ್ನುತ್ತಿದ್ದಾರೆ
ಈ ಎಲ್ಲಾ ಬೆಳವಣಿಗೆಗಳ ನಡುವೆ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಮಹತ್ವದ ಭವಿಷ್ಯ ನುಡಿದಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಎಂಬ ಭವಿಷ್ಯವಾಣಿ ನುಡಿದಿದ್ದಾರೆ.
ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವದಾರಾಧನೆ ಮಾಡುವ ಸಮಾಜ. ಹಾಲು ಕೆಟ್ಟರು ಹಾಲು ಸಮಾಜ ಕೆಡದು ಹಕ್ಕು ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು, ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ. ಸಿಎಂ ಕುರ್ಚಿಯಿಂದ ಬಿಡಿಸುವದು ಅಷ್ಟು ಸುಲಭವಲ್ಲ, ಸಿಎಂ ಸಿದ್ದರಾಮಯ್ಯ ಅವರು ಅವರಾಗೆ ಸಿಎಂ ಸ್ಥಾನ ಬಿಡಬೇಕು ಹೊರತು ನೀವು ಬಿಡಿಸಿಕೊಳ್ಳುವದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಮುಂಬರುವಸಂವತ್ಸರದಲ್ಲಿ ರಾಜ್ಯಕ್ಕೆ ತೊಂದರೆ ತಾಪತ್ರೆವಿಲ್ಲ, ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಸುಭೀಕ್ಷತೆ ಇರುತ್ತದೆ, ನಾಡಿನಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ. ಯುಗಾದಿ ನಂತರ ಕರ್ನಾಟಕ ಬಗ್ಗೆ ಗೊತ್ತಾಗಲಿದೆ" ಎಂದು ಹೇಳಿದ್ದಾರೆ.
Advertisement